ವಿಪಕ್ಷ ನಾಯಕರಾಗಿಬಿಟ್ಟರೆ ಪೋಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? : ಅಶೋಕ್ ವಿರುದ್ಧ ಕಾಂಗ್ರೆಸ್ ಆಕ್ರೋಶ
ಬೆಂಗಳೂರು : "ಆರ್.ಅಶೋಕ್ ಅವರೇ, ವಿಪಕ್ಷ ನಾಯಕರಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? ನಿನ್ನ ಅ-_ ಅನ್ನೋದು ಎಷ್ಟು ಸರಿ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, "ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ?. ನಾಲಿಗೆ ಸಂಸ್ಕಾರ ಹೇಳುತ್ತದೆ, ಸಿ.ಟಿ.ರವಿ ನಂತರ ನಿಮ್ಮ ಸರದಿಯೇ? ನೀವು ವಿರೋಧಪಕ್ಷ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುದನ್ನು ನಿಮ್ಮ ನಡತೆ ಹೇಳುತ್ತಿದೆ. ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ನಿಮ್ಮ ನಾಯಕರ ಹೊಲಸು ನಾಲಿಗೆಯನ್ನು ಯಾವ ಫೆನಾಯಿಲ್‌ನಿಂದ ತೊಳೆಯಬೇಕು" ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪೊಲೀಸ್ ಅಧಿಕಾರಿಗೆ ಅವಾಚ್ಯ ನಿಂದನೆ, ಬೆದರಿಕೆ ಆರೋಪ : ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವ ಸರಕಾರದ ಕ್ರಮವನ್ನು ವಿರೋಧಿಸಿ ನಗರದ ಕೆಂಪೇಗೌಡ ಕೇಂದ್ರ (ಮೆಜೆಸ್ಟಿಕ್) ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಕೈಗೊಂಡ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದ ಕಾರಣಕ್ಕೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ತಾಳ್ಮೆ ಕಳೆದುಕೊಂಡು ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣ ಶುಕ್ರವಾರ ವರದಿಯಾಗಿದೆ.
ಬಿಜೆಪಿಯ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಸೇರಿದಂತೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ಪದಾಧಿಕಾರಿಗಳ ನೇತೃತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಹಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನೆಗೆ ತಡೆ ಹಾಕುತ್ತಿದ್ದಂತೆ ಅಸಹನೆ ತೋರಿದ ಆರ್.ಅಶೋಕ್, ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ, ನಾನು ಕೂಡ ರಾಜ್ಯದ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೇನೆ. ನೀವು ನಮ್ಮನ್ನು ಮುಟ್ಟಿ ನೋಡಿ.. ಎಂದು ಅವಾಚ್ಯ ಶಬ್ದಗಳಿಂದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ನಿಂದಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.