ದೇಶದ ಜನರಿಗೆ ಉಚಿತ ಆಹಾರ ಯೋಜನೆ, ಪ್ರಧಾನಿ ಮೋದಿಯ ಕೊಡುಗೆಯಲ್ಲ : ಪ್ರೊ.ಯೋಗೇಂದ್ರ ಯಾದವ್

Update: 2025-01-03 16:58 GMT

ಬೆಂಗಳೂರು: ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಯೋಜನೆ ಮೋದಿಯ ಕೊಡುಗೆಯಲ್ಲ, ಬದಲಾಗಿ ಅದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ. ನರೇಗಾದಂತಹ ಯೋಜನೆಗಳು ಕಾಂಗ್ರೆಸ್ ಸರಕಾರದ್ದೇ ಆಗಿದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ.ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಶುಕ್ರವಾರ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕವು ಆಯೋಜಿಸಿದ್ದ ‘ಡಾ.ಮನಮೋಹನ್ ಸಿಂಗ್ ಅವರ ನೀತಿಗಳು: ಭಾರತದ ವರ್ತಮಾನ ಹಾಗೂ ಭವಿಷ್ಯ’ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳ ಪರವಾದ ವ್ಯಕ್ತಿ. ಅವರ ನೀತಿಗಳು ಪ್ರಾಮಾಣಿಕ ಉದ್ದೇಶ ಹೊಂದಿದ್ದವು, ಮಾನವೀಯವಾಗಿದ್ದವು ಎಂದು ನುಡಿದರು.

ಮನಮೋಹನ್ ಸಿಂಗ್ ಕುರಿತು ಆಕಸ್ಮಿಕ ಪ್ರಧಾನಮಂತ್ರಿ ಎಂದು ಹೇಳಲಾದ ಟೀಕೆಗಳನ್ನೂ ಕೇಳಿದ್ದೇವೆ. ಹಾಗಿದ್ದರೆ ಯಾರು ಅಲ್ಲ? ವಿಷಯ ಏನೆಂದರೆ ಯಾವುದು ಉತ್ತಮ ಆಕಸ್ಮಿಕ, ಯಾವುದು ಬಹಳ ಬಹಳ ಕೆಟ್ಟ ಆಕಸ್ಮಿಕ, ಅಪಘಾತ ಎಂಬುದಷ್ಟೇ ವಿಚಾರವಾಗಿದೆ ಎಂದರು.

ಅವರನ್ನು ಹಿಂದಿನಿಂದ ಮಾರ್ಗದರ್ಶನ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅವರಿಗೆ ಸಲಹೆ ನೀಡಿ ಮುನ್ನಡೆಸುವವರನ್ನೇ ದೇಶವು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿತ್ತು. ಆದರೆ ಅವರು ನಿರಾಕರಿಸಿದ್ದರು. ಆದರೆ ಅವರನ್ನು ಅಹಮದಾಬಾದ್‌ನ ಯಾರೋ ವ್ಯಾಪಾರಿ ಮಾರ್ಗದರ್ಶನ ಮಾಡಿರಲಿಲ್ಲ ಎಂದು ಅವರು ತಿಳಿಸಿದರು.

ಯಾರಿಂದಲೂ ಮಾರ್ಗದರ್ಶಿನ ಪಡೆಯದ ನಾಯಕರಿಗಿಂತ ಯಾರಿಂದಲಾದರೂ ಮಾರ್ಗದರ್ಶಿಸಲ್ಪಡುವುದು ಉತ್ತಮ. ಯಾರಾದರೂ ಮಾರ್ಗದರ್ಶನ ಮಾಡಿದ್ದರೆ, ನೋಟು ರದ್ದತಿಯಂತಹದ್ದನ್ನು ಯಾರೂ ಜಾರಿ ಮಾಡಿರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳು ಭಾರತಕ್ಕೆ ಬಹಳ ಕೆಟ್ಟವು, ಅದನ್ನು ತಂದವರು ಮನಮೋಹನ್ ಸಿಂಗ್ ಎಂಬುದನ್ನೇ ನಾವು ಕಲಿಯುತ್ತಾ ಬಂದಿದ್ದೆವು. ಈ ನೀತಿಗಳು ಭಾರತಕ್ಕೆ ದೊಡ್ಡ ಅಪಾಯ ತಂದವು ಎಂದೇ ಇಂದಿಗೂ ಅನೇಕರು ನಂಬಿದ್ದಾರೆ. ಆದರೆ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳಿಂದ ಭಾರತಕ್ಕೆ ಎಂತಹ ಅನಾಹುತ ಕಾದಿದೆ ಎನ್ನಲಾಗಿತ್ತೋ ಅದು ನಡೆಯಿತೇ? ಭಾರತ ಆರ್ಥಿಕ ವಸಾಹತುವಾಗಿ ಅಮೆರಿಕದ ಅಡಿಯಾಳಾಗುತ್ತದೆ ಎಂದು ಹೇಳಲಾಗಿತ್ತು. ಹಾಗೆ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.

ಸಂವಾದದಲ್ಲಿ ಅಂಕಣಕಾರ ಎ.ನಾರಾಯಣ್, ಡಾ. ಹಿಮಾಶು, ಸೀತಾಲಕ್ಷ್ಮೀ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News