ನಮ್ಮನ್ನು ಟೀಕಿಸುವ ಯಾವ ನೈತಿಕತೆಯೂ ಬಿಜೆಪಿಗಿಲ್ಲ : ರಾಮಲಿಂಗಾರೆಡ್ಡಿ
ಬೆಂಗಳೂರು : ಸರಕಾರಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಗೊಂಡ ಬೆನ್ನಲ್ಲೇ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಏರಿಕೆಯಾಗಿದ್ದ ಬಸ್ ಪ್ರಯಾಣ ದರಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ರವಿವಾರ ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಅದರಲ್ಲೂ ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಆಗಿನ ಬಿಜೆಪಿ ಸರಕಾರವು ಏಳು ಬಾರಿ ಟಿಕೆಟ್ ದರ ಪರಿಷ್ಕರಣೆ ಮಾಡಿತ್ತು. ಬರೋಬ್ಬರಿ ಶೇ.47.79ರಷ್ಟು ಬಸ್ ಟಿಕೆಟ್ ದರ ಹೆಚ್ಚಿಸಿತ್ತು ಎಂದು ಅಂಕಿ-ಅಂಶಗಳನ್ನು ಬಹಿರಂಗಗೊಳಿಸಿದರು.
ಬಿಜೆಪಿಗೆ ನಮ್ಮನ್ನು ಟೀಕಿಸುವ ಯಾವ ನೈತಿಕತೆಯೂ ಇಲ್ಲ, ನಾಚಿಕೆಯೂ ಇಲ್ಲ. ಹಿಂದಿನ ಬಿಜೆಪಿ ಸರಕಾರವೇ ಸಾರಿಗೆ ಇಲಾಖೆ ಮೇಲೆ ಹೊರಿಸಿರುವ ಸಾಲದ ಹೊರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಬೆಲೆ ಏರಿಕೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ನಾವು ಭರವಸೆ ಕೊಟ್ಟಂತೆ ಜಾರಿ ಮಾಡಿದ್ದೇವೆ. ಇಂತಹ ಜನಪ್ರಿಯ ಯೋಜನೆಯ ವಿರುದ್ಧ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಶಕ್ತಿ ಯೋಜನೆಯಂತಹ ಯೋಜನೆಗಳು ಜಾರಿಯಲ್ಲಿಲ್ಲದ ರಾಜ್ಯಗಳೂ ಬೆಲೆ ಏರಿಕೆ ಮಾಡುತ್ತವೆ. ಶಕ್ತಿ ಯೋಜನೆಗೂ, ಬೆಲೆ ಏರಿಕೆಗೂ ಸಂಬಂಧವಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.