ಸಿಟಿ ರವಿ ಹೇಳಿಕೆ ಪ್ರಕರಣ | ಸ್ಥಳ ಮಹಜರಿಗೆ ಸಿಐಡಿಗೆ ಅನುಮತಿ ಇಲ್ಲ : ಸಭಾಪತಿ ಹೊರಟ್ಟಿ
ಬೆಳಗಾವಿ : ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿಟಿ ರವಿ ಹೇಳಿಕೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಪಂಚನಾಮೆ ಮಾಡಬೇಕೆಂದರೆ, ಅದು ಯಾವ ರೀತಿಯಲ್ಲಿ ಎನ್ನುವುದನ್ನು ಸಿಐಡಿ ಮಾಹಿತಿ ನೀಡಲಿ. ಅಲ್ಲಿಯವರೆಗೂ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದರು.
ವಿಡಿಯೊ ಸಾಕ್ಷಿ ಕೊಡಿ ಎಂದು ಸಿಐಡಿ ಪತ್ರ ಬರೆದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ವಿಡಿಯೊ ಸಾಕ್ಷಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಸಿ.ಟಿ.ರವಿ ಕೊಟ್ಟಿದ್ದರು. ಎರಡನ್ನೂ ನಮ್ಮ ಕಾರ್ಯದರ್ಶಿ ಜೊತೆಗೆ ನಮ್ಮದೇ ತಂಡಕ್ಕೆ ವಿಡಿಯೊ ಕೊಟ್ಟಿದ್ದು, ಶೀಘ್ರದಲ್ಲಿಯೇ ಎಫ್‍ಎಸ್‍ಎಲ್‍ಗೆ ಕಳುಹಿಸುತ್ತೇವೆ. ವರದಿ ಬಂದ ಬಳಿಕ ಸತ್ಯಾಂಶ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ಇಬ್ಬರೂ ಕೂಡ ಡಿ.19ರಂದು ದೂರು ಕೊಟ್ಟಿದ್ದರು. ಎರಡೂ ದೂರು ನೋಡಿ ಅವತ್ತೇ ನಾನು ತೀರ್ಮಾನ ಮಾಡಿದೆ, ಅಲ್ಲಿಗೆ ನನ್ನ ಪ್ರಕ್ರಿಯೆ ಮುಗಿತು. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಸಿ.ಟಿ.ರವಿ ವಿರುದ್ಧ ದೂರು ನೀಡಿದ್ದಾರೆ. ಹೆಬ್ಬಾಳ್ಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲಿಸುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೊ, ಆಡಿಯೊ ನೋಡುತ್ತೇವೆ ಎಂದು ಹೇಳಿದರು.
ಆಯೋಗಗಕ್ಕೆ ಸಿಟಿ ರವಿ ದೂರು: ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ 13 ಪುಟಗಳ ದೂರನ್ನು ಸಿಟಿ ರವಿ ಸಲ್ಲಿಸಿದ್ದು, ಬಂಧನದ ವೇಳೆ ಪೊಲೀಸ್ ದೌರ್ಜನ್ಯ, ಅಧಿಕಾರಿಗಳು ಭಾಗಿಯಾಗಿದ್ದು, ನಕಲಿ ಎನ್‍ಕೌಂಟರ್‌ಗೆ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಆಪ್ತರು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಕೂಡ ಉಲ್ಲೇಖಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಿಂಸೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಜಿಪಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.