‘ಈ ಶತಮಾನದ ನಿಜವಾದ ಕಟ್ಟಪ್ಪ ಅಂದರೆ ಅದು ನಿಮ್ಮ ತಂದೆ’ : ಪ್ರಿಯಾಂಕ್ ಖರ್ಗೆಗೆ ಆರ್.ಅಶೋಕ್ ಲೇವಡಿ

Update: 2025-01-05 14:05 GMT

ಅಶೋಕ್/ಪ್ರಿಯಾಂಕ್‌ ಖರ್ಗೆ

ಬೆಂಗಳೂರು  ‘ಈ ಶತಮಾನದ ನಿಜವಾದ ಕಟ್ಟಪ್ಪ ಅಂದರೆ ಅದು ನಿಮ್ಮ ತಂದೆ(ಮಲ್ಲಿಕಾರ್ಜುನ ಖರ್ಗೆ)ಯವರೇ’ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಲೇವಡಿ ಮಾಡಿದ್ದಾರೆ.

ರವಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪಾಪ ನಿಮ್ಮ ತಂದೆಯವರು ಈ ಇಳಿವಯಸ್ಸಿನಲ್ಲೂ ಆ ಕಾಮಿಡಿ (ರಾಹುಲ್ ಗಾಂಧಿ)ಪೀಸ್‍ನ ಮಾನ ಉಳಿಸಲು ರಾಜ್ಯದಲ್ಲಿ ಸಿಗಬಹುದಾದ ಅಧಿಕಾರವನ್ನು ತ್ಯಾಗ ಮಾಡಿ ಅಲ್ಲಿ ಆ ಕಾಮಿಡಿ ಪೀಸ್‍ಗೆ ರಕ್ಷಣೆ ಕೊಡುತ್ತಿದ್ದಾರಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

‘ಸ್ವಾಮಿ ಪ್ರಿಯಾಂಕ್ ಖರ್ಗೆ ಅವರೇ, ಭಾರತೀಯತೆಯೂ ಇಲ್ಲದ, ರಾಷ್ಟ್ರೀಯತೆಯೂ ಇಲ್ಲದ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ 10 ವರ್ಷಗಳಿಂದ ಈ ದೇಶದ ಅತೀದೊಡ್ಡ ಕಾಮಿಡಿ ಸಿನಿಮಾ ಆಗಿದೆ. ಈ ಸೂಪರ್ ಹಿಟ್ ಕಾಮಿಡಿ ಸಿನಿಮಾದ ಸ್ಟಾರ್ ಕಾಮಿಡಿಯನ್ ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ’ ಎಂದು ಅವರು ಟೀಕಿಸಿದ್ದಾರೆ.

‘ಅಂದಹಾಗೆ ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ 35 ಶಾಸಕರು ಸಭೆ ಸೇರಿದ್ದರಂತಲ್ಲ, ಅಲ್ಲಿ ತಾವು ಇದ್ದರೋ? ಅಥವಾ ಆತ್ಮಹತ್ಯೆಗೆ ಕಾರಣವಾದರೂ ಸರಿ, ಕೊಲೆ ಮಾಡಿದರೂ ಸರಿ, ಎಐಸಿಸಿ ಅಧ್ಯಕ್ಷರ ಕೋಟಾದಲ್ಲಿ ತಮ್ಮ ಕುರ್ಚಿ ಮಾತ್ರ ಸುಭದ್ರ ಎಂದು ಯಾವ ಬಣಕ್ಕೂ ಸೇರದೆ ತಟಸ್ಥರಾಗಿರುವ ನಿರ್ಧಾರ ಮಾಡಿದ್ದೀರೋ?’ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

‘ಬಿಜೆಪಿಯಲ್ಲಿ ಸಹಮತ, ಸಹಬಾಳ್ವೆ, ಸಮಾಧಾನ ಇಲ್ಲದೆ ತಮ್ಮ ಹುಳುಕು ಮುಚ್ಚಿಕೊಳ್ಳಲು ‘ಪ್ರಿಯಾಂಕ್ ಖರ್ಗೆ’ ಹೆಸರಿಗೆ ಜೋತು ಬಿದ್ದಿದೆ. ನನ್ನ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಬಿಜೆಪಿಯಲ್ಲೇ ಸಹಮತ ಇಲ್ಲದಿರುವುದು ಬಟಾಬಯಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ಮಾತಿಗೆ, ಪ್ರತಿಭಟನೆಯ ಕರೆಗೆ ಬಿಜೆಪಿಯಲ್ಲೇ ನಯಾಪೈಸೆ ಕಿಮ್ಮತ್ತು ಸಿಗದಿರುವಾಗ ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾ ನೋಡಿದಂತೆ ಭಾಸವಾಗುತ್ತದೆ’

-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News