ಬಡವರನ್ನು ನಿರ್ಲಕ್ಷ್ಯಿಸುವುದು ಮಾನಸಿಕ ಗುಲಾಮಗಿರಿಯ ಧ್ಯೋತಕ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಸೂಟು ಬೂಟು ಹಾಕಿಕೊಂಡು ಬರುವವರನ್ನು ಕುರ್ಚಿಯಲ್ಲಿ ಕೂರಿಸಿ ಮಾತನಾಡಿಸುವುದನ್ನು, ಮಾಸಲು ಬಟ್ಟೆಯಲ್ಲಿ ಬರುವ ಬಡವರನ್ನು ನಿರ್ಲಕ್ಷ್ಯದಿಂದ ಕಾಣುವುದು ನಮ್ಮ ಮಾನಸಿಕ ಗುಲಾಮಗಿರಿಯ ಧ್ಯೋತಕ. ಇದನ್ನು ಕಿತ್ತೊಗೆದು ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅವಕಾಶಗಳು ಸಿಗುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಿಮಗೆ ಸಿಕ್ಕಿರುವ ವಿದ್ಯೆ ಮತ್ತು ಅವಕಾಶಗಳ ಹಿಂದೆ ಸಮಾಜದ ಋಣ ಇದೆ. ಈ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಎರಡು ಹೊತ್ತಿನ ಊಟಕ್ಕೂ ಶ್ರಮಿಸುತ್ತಿರುವ ಕಟ್ಟ ಕಡೆಯ ಜನರ ಪರವಾಗಿ ನಿಮ್ಮ ಬದ್ಧತೆ ತೋರಿಸಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಂಬೇಡ್ಕರ್ ಸಂವಿಧಾನ ರಚನಾ ಸಭೆಯಲ್ಲಿ ಮಾಡಿರುವ ಭಾಷಣವನ್ನು ನೀವೆಲ್ಲಾ ಓದಬೇಕು. ಐತಿಹಾಸಿಕ ಕಾರಣಗಳಿಂದಾಗಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕು ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಈ ಆಶಯ ಈಡೇರಿಸಲು ನಾವು ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀನಿ. ಮೊದಲ ಬಾರಿ ಮುಖ್ಯಮಂತ್ರಿ ಆಗಿ ಹಲವಾರು ಭಾಗ್ಯಗಳು, ಈ ಬಾರಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೀವಿ. ಮನಮೋಹನ್ ಸಿಂಗ್ ಪ್ರಧಾನಿ ಆಗಿ ಆಹಾರ, ಶಿಕ್ಷಣ, ಮಾಹಿತಿ ಹಕ್ಕುಗಳನ್ನು ನೀಡುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಜನರ ಹಕ್ಕುಗಳನ್ನಾಗಿ ಮಾಡಿದರು. ಇವೆಲ್ಲವೂ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ಉದ್ದೇಶವನ್ನೇ ಹೊಂದಿವೆ. ಆದುದರಿಂದ, ಮಧ್ಯವರ್ತಿಗಳೇ ಇಲ್ಲದ ನಮ್ಮ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿ ಎಂದು ಅವರು ಕರೆ ನೀಡಿದರು.
ಅಂಬೇಡ್ಕರ್ ಅವರಿಂದ ಬುದ್ದ, ಬಸವ, ಗಾಂಧಿ ಎಲ್ಲರೂ ಸಮಾಜದ ಸಮಾನತೆಗಾಗಿ, ತಾರತಮ್ಯದ ಸಮಾಜದ ಬದಲಾವಣೆಗಾಗಿ ಶ್ರಮಿಸಿದರು. ಆದರೂ ಇನ್ನೂ ಅಸಮಾನತೆ ಹೋಗಿಲ್ಲ ಎಂದರೆ ಎಲ್ಲರಿಗೂ ಸಮಾನ ಅವಕಾಶ ಸಿಗದೇ ಇರುವುದೇ ಮುಖ್ಯ ಕಾರಣ. ಆದುದರಿಂದ, ಸಮಾಜದಲ್ಲಿ ಪಟ್ಟಭದ್ರರು ಇನ್ನೂ ಹೆಚ್ಚಾಗಿದ್ದಾರೆ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.
ಕೆಎಎಸ್ ಅಧಿಕಾರಿಗಳ ಸಂಘ ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಎಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲು ನಾವು ಸಿದ್ದರಿದ್ದೇವೆ. ಆದರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಗುಣಾತ್ಮಕ ಕರ್ತವ್ಯ, ಸೇವೆ ಮುಖ್ಯ.
ಕೆಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ದವಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ. ಅಲ್ಲದೇ, ಭಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸತ್ಯವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.