ಬಿಜೆಪಿ ಸಾಲ ಬಿಟ್ಟು ಹೋಗಿದ್ದರಿಂದ ಬಸ್ ಪ್ರಯಾಣ ದರ ಏರಿಕೆ : ಸಚಿವ ರಾಮಲಿಂಗಾರೆಡ್ಡಿ

Update: 2025-01-03 15:00 GMT

ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯ ಸರಕಾರಕ್ಕೆ ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡಲು ಇಷ್ಟವಿರಲಿಲ್ಲ. ಆದರೆ, ಹಿಂದಿನ ಬಿಜೆಪಿ ಸರಕಾರ ರಾಜ್ಯದ ಸಾರಿಗೆ ಸಂಸ್ಥೆಗಳ ಮೇಲೆ 5,039 ಕೋಟಿ ರೂ.ಸಾಲ ಬಿಟ್ಟು ಹೋಗಿದ್ದರಿಂದ ಅನಿವಾರ್ಯವಾಗಿ ಬಸ್ ಪ್ರಯಾಣ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಿಸಬೇಕಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನಿಗಮಗಳಲ್ಲಿ ಐದು ವರ್ಷಗಳಿಂದ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಿಲ್ಲ(ಬಿಎಂಟಿಸಿಯಲ್ಲಿ 2014ರಿಂದ ಪರಿಷ್ಕರಣೆ ಮಾಡಲಾಗಿಲ್ಲ). 2020ರಲ್ಲಿ ಪ್ರತಿದಿನ ಸರಾಸರಿ ಡಿಸೇಲ್ ವೆಚ್ಚ 9.16ಕೋಟಿ ರೂ.ಗಳಿತ್ತು. ಪ್ರಸಕ್ತ ಪ್ರತಿದಿನದ ಡಿಸೇಲ್ ವೆಚ್ಚ 13.21ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಎಂದು ಹೇಳಿದರು.

ಕಳೆದ 12 ವರ್ಷಗಳಿಂದ ವಿದ್ಯಾರ್ಥಿ ಪಾಸು ದರ ಹೆಚ್ಚಳ ಮಾಡಿಲ್ಲ. 2020-2023ರ ಅವಧಿಯಲ್ಲಿ ಶೇ.15ರಷ್ಟು ವೇತನ ಪರಿಷ್ಕರಣೆಯಿಂದಾಗಿ ಸಿಬ್ಬಂದಿ ವೆಚ್ಚವು ಹೆಚ್ಚಾಗಿದೆ. ಪ್ರತಿದಿನದ ಸಿಬ್ಬಂದಿ ವೆಚ್ಚವು 12.85 ಕೋಟಿ ರೂ.ಗಳಿಂದ 18.36 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.

ಶಕ್ತಿ ಯೋಜನೆಯಡಿ 2023ರ ಜೂ.11ರಿಂದ ಪ್ರಸಕ್ತ ಸಾಲಿನ ಜ.2ರವರೆಗೆ 363 ಕೋಟಿ ಮಹಿಳಾ ಪ್ರಯಾಣಿಕರು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರಕಾರವು 8800 ಕೋಟಿ ರೂ.ಅನುದಾನವನ್ನು ನೀಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರವು ಕೆಎಸ್ಸಾರ್ಟಿಸಿಗೆ 2481 ಕೋಟಿ ರೂ., ಬಿಎಂಟಿಸಿಗೆ 1126 ಕೋಟಿ ರೂ., ವಾಯುವ್ಯ ಸಾರಿಗೆಗೆ 1613 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಗೆ 1321 ಕೋಟಿ ರೂ.ಗಳಂತೆ ಒಟ್ಟು ನಾಲ್ಕು ಸಾರಿಗೆ ಸಂಸ್ಥೆಗಳಿಗೆ 6543 ಕೋಟಿ ರೂ.ಅನುದಾನವನ್ನು 2023ರ ನವೆಂಬರ್‌ ವರೆಗೆ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಡಿಸೇಲ್ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಉಂಟಾಗುತ್ತಿರುವ ಗಣನೀಯ ಹೆಚ್ಚಳವು ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿದೆ. ಈ ಹೆಚ್ಚಳವನ್ನು ಸರಿದೂಗಿಸಲು ಪ್ರಯಾಣಿಕ ಬಸ್ ದರಗಳನ್ನು ಪರಿಷ್ಕರಿಸುವುದು ಅನಿವಾರ್ಯವಾಗಿತ್ತು. ಅದಾಗ್ಯೂ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯದ ಸಾರಿಗೆ ನಿಗಮಗಳ ದರಗಳು ಕಡಿಮೆ ಇವೆ ಎಂದು ಅವರು ಹೇಳಿದರು.

ಶಕ್ತಿ ಯೋಜನೆಯ ಅನುಷ್ಠಾನದ ನಂತರ 4340 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೇ, ಕಳೆದ ಎರಡು ವರ್ಷಗಳಲ್ಲಿ 1300 ಹಳೆ ವಾಹನಗಳನ್ನು ಪುನಶ್ಚೇತನಗೊಳಿಸಿ ಕಾರ್ಯಾಚರಣೆಗೊಳಿಸಲಾಗಿದೆ. ಕಳೆದ 5-6 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ಅವರು ತಿಳಿಸಿದರು.

ನಮ್ಮ ಸರಕಾರವು 9 ಸಾವಿರ ವಿವಿಧ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದೆ. ಪ್ರಸಕ್ತ 3500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದೆ. ಉಳಿದ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸುಮಾರು ಒಂದು ಸಾವಿರ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಅಧಿಕಾರದಲ್ಲಿರುವವರೆಗೆ ‘ಶಕ್ತಿ ಯೋಜನೆ’ ನಿಲ್ಲುವುದಿಲ್ಲ: ಬಿಜೆಪಿಯವರು ಮಹಿಳಾ ವಿರೋಧಿಗಳು. ಶಕ್ತಿ ಯೋಜನೆಯನ್ನು ನಿಲ್ಲಿಸಲು ಅಪಪ್ರಚಾರ ಮಾಡುತ್ತಿದ್ದಾರೆ. 2028ರಲ್ಲೂ ನಮ್ಮದೇ ಸರಕಾರ ಅಧಿಕಾರಕ್ಕೆ ಬರುತ್ತದೆ. 2033ರವರೆಗೂ ಶಕ್ತಿ ಯೋಜನೆ ನಿಲ್ಲುವುದಿಲ್ಲ. ಬಿಜೆಪಿಯವರು ಎಲ್ಲದಕ್ಕೂ ಪ್ರತಿಭಟನೆಗಳನ್ನು ಮಾಡುತ್ತಾರೆ. ಆದರೆ, ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ದರ ಏರಿಕೆ ಮಾಡಿದಾಗ ಯಾಕೆ ಪ್ರತಿಭಟನೆ ಮಾಡಿಲ್ಲ ರಾಮಲಿಂಗಾರೆಡ್ಡಿ ಕಿಡಿಗಾರಿದರು.

‘ಸಾರಿಗೆ ನೌಕರರ ಬೇಡಿಕೆ ಕುರಿತಂತೆ ಜ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ನೌಕರರ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವವರೆಗೆ ಶಕ್ತಿ ಯೋಜನೆ ನಿಲ್ಲಿಸುವುದಿಲ್ಲ’

-ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News