ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ : ಡಾ.ಜಿ.ಪರಮೇಶ್ವರ್
ಬೆಂಗಳೂರು : ಹೊಸ ವರ್ಷಾಚರಣೆ ಸಂಭ್ರಮ ನಡೆದ ಬೆಂಗಳೂರಿನ ಎಂಜಿ ರಸ್ತೆ ಸೇರಿದಂತೆ ಹಲವೆಡೆ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಪೊಲೀಸರು ಉತ್ತಮವಾಗಿ ಭದ್ರತೆ ಒದಗಿಸಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ಹೊಸ ವರ್ಷದ ಹಿನ್ನೆಲೆ ಸದಾಶಿವನಗರದಲ್ಲಿರುವ ಸಚಿವರ ನಿವಾಸಕ್ಕೆ ಆಗಮಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಎಂ.ಎ.ಸಲೀಂ, ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಎಡಿಜಿಪಿಗಳಾದ ಆರ್.ಹಿತೇಂದ್ರ, ಹೇಮಂತ್ ನಿಂಬಾಳ್ಕರ್, ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್, ಉಮೇಶ್, ಶರತ್‍ಚಂದ್ರ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸ ವರ್ಷಾಚರಣೆ ವೇಳೆ ಒಂದೇ ಒಂದು ಅಹಿತಕರ ಘಟನೆ ಆಗಿಲ್ಲ. ಪೊಲೀಸರು ಉತ್ತಮವಾಗಿ ಭದ್ರತೆ ಒದಗಿಸಿದ್ದರು ಎಂದು ಅವರ ಕಾರ್ಯಕ್ಕೆ ಶ್ಲಾಘಿಸಿದರು.
ಸಿಟಿ ರವಿ ಪ್ರಕರಣ ಸಂಬಂಧ ವಿಧಾನ ಪರಿಷತ್ ಮಹಜರ್ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಹಜರ್ ಬಗ್ಗೆ ಸಿಐಡಿ ಪೊಲೀಸರೇ ತೀರ್ಮಾನಿಸುತ್ತಾರೆ. ಅದೇ ರೀತಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ತಮ್ಮ ಪಾತ್ರ ಇಲ್ಲ ಎಂದಿದ್ದು, ತನಿಖೆ ನಡೆಯುತ್ತಿದೆ. ವರದಿ ಬಳಿಕ ಈ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.