ಮಹಿಳಾ ಮೇಲಾಧಿಕಾರಿಗಳನ್ನು ಒಪ್ಪಿಕೊಳ್ಳದ ಪುರುಷ ಸ್ಥಿತಿ ಇಂದಿಗೂ ಜೀವಂತ : ಶೋಭಾ
ಬೆಂಗಳೂರು : ಮಹಿಳಾ ಮೇಲಾಧಿಕಾರಿಗಳನ್ನು ಅಧೀನ ಪುರುಷ ಅಧಿಕಾರಿಗಳು ಒಪ್ಪಿಕೊಳ್ಳಲಾರದಂತಹ ಪರಿಸ್ಥಿತಿ ಇಂದಿಗೂ ಜೀವಂತವಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‍ಎಸ್)ಯ ರಾಜ್ಯ ಕಾರ್ಯದರ್ಶಿ ಶೋಭಾ ತಿಳಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿಭವನದ ಕಸ್ತೂರಬಾ ಸಭಾಂಗಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‍ಎಸ್)ಯ 7ನೇ ಬೆಂಗಳೂರು ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಪುರುಷರ ಮಾತುಗಳಿಗೆ ಒಪ್ಪದಿದ್ದಾಗ ಅವರನ್ನು ದೌರ್ಜನ್ಯದ ಮೂಲಕ ಬಗ್ಗಿಸಲಾಗುತ್ತಿದೆ. ಪುರುಷ ಪ್ರಧಾನ ಧೋರಣೆಯ ವಿರುದ್ಧ ಹೋರಾಡುವುದರ ಜೊತೆಗೆ ಹೆಣ್ಣು ಮಕ್ಕಳು ಹಿಂದಿನ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದರು.
ಎಸ್‍ಯುಸಿಐ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಮಾತನಾಡಿ, ಇಂದು ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಘೋಷಿಸಲಾಗಿದೆ. ಆದರೆ, ಅದು ನಿಜವಾಗಿಲ್ಲ. ಸಮಾನತೆ ಪಡೆಯಲು ಹೆಣ್ಣು ಮಕ್ಕಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.
ಎಐಎಂಎಸ್‍ಎಸ್‍ನ ರಾಜ್ಯ ಅಧ್ಯಕ್ಷೆ ಎಂ.ಎನ್.ಮಂಜುಳಾ ಮಾತನಾಡಿ, ಮಹಿಳೆಯ ಮೇಲಿನ ದೌರ್ಜನ್ಯ, ಅತ್ಯಾಚಾರಗಳಿಗೆ ಕಡಿವಾಣ ಹಾಕಲು ಸಂಘಟನೆಗಳ ಬಲವರ್ಧನೆಗೊಳ್ಳಬೇಕು. ಆ ಮೂಲಕ ದಿಟ್ಟ ಹೋರಾಟಗಳನ್ನು ಕೈಗೊಳ್ಳಬೇಕು. ನಾವೆಲ್ಲರೂ ಸಂಘಟನೆ ಬಲಪಡಿಸಲು ಹಾಗೂ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುಲು ಮುಂದಾಗೋಣ ಎಂದು ಕರೆ ನೀಡಿದರು.
ಸಮ್ಮೇಳನಲ್ಲಿ ಎಐಎಂಎಸ್‍ಎಸ್‍ನ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಹೇಮಾವತಿ, ಬೆಂಗಳೂರು ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯೆ ವೈಷ್ಣವಿ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎ.ಶಾಂತ, ಬೆಂಗಳೂರು ಸಮಿತಿಯ ಸದಸ್ಯೆ ರುಕ್ಮಿಣಿ ಸೇರಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.