ಸಾವಿರ ಪದಗಳಿಗಿಂತಲೂ ಚಿತ್ರವೊಂದು ಪ್ರಭಾವಶಾಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದ್ದು, ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಇಲ್ಲಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 22ನೆ ಚಿತ್ರ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ಏಳನೆ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ರಾಜ್ಯ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ. ಇನ್ನೂ, ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರನಟ ನಡೆಯುವುದು ಹೆಮ್ಮೆಯ ಸಂಗತಿ ಎಂದ ಅವರು, ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರದಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗೆ ಇದೊಂದು ಸುವರ್ಣಾವಕಾಶ ಎಂದು ಅವರು ಹೇಳಿದರು.
ಇನ್ನೂ, ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿರುವುದು ಗಮನ ಸೆಳೆದಿವೆ ಎಂದರು.
ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ.ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ. ಹೆಣ್ಣುಮಕ್ಕಳು ಶೋಷಣೆ, ತಾರತಮ್ಯ, ಅನ್ಯಾಯಕ್ಕೆ ಒಳಗಾದವರು. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸಲು ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಸೇರಿದಂತೆ ಪ್ರಮುಖರಿದ್ದರು.