ಬೆಂಗಳೂರು : ಕಟ್ಟಡದಿಂದ ಬಿದ್ದು ಸ್ನಾತಕೋತ್ತರ ವಿದ್ಯಾರ್ಥಿ ಮೃತ್ಯು
ಬೆಂಗಳೂರು: ವಿದ್ಯಾರ್ಥಿ ನಿಲಯದ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಐಐಎಂ) ಸ್ನಾತಕೋತ್ತರ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತನನ್ನು ಎಂಬಿಎ ಎರಡನೆ ವರ್ಷದ ವಿದ್ಯಾರ್ಥಿ ಗುಜರಾತ್ ಮೂಲದ ನಿಲಯ್ ಕೈಲಾಶ್ ಭಾಯ್ ಪಟೇಲ್(28) ಎಂದು ಗುರುತಿಸಲಾಗಿದೆ.
ಕ್ಯಾಂಪಸ್ ಆವರಣದ ಹಾಸ್ಟೆಲ್‍ನ ಬೇರೆ ಬ್ಲಾಕ್‍ನಲ್ಲಿರುವ ಸ್ನೇಹಿತರ ಕೋಣೆಯಲ್ಲಿ ಹುಟ್ಟುಹಬ್ಬ ಆಚರಿಸಲು ನಿಲಯ್ ತೆರಳಿದ್ದ. ಶನಿವಾರ ತಡರಾರಾತ್ರಿ ಸುಮಾರಿಗೆ ಸ್ನೇಹಿತನ ಕೊಠಡಿಯಿಂದ ಹೊರಟು ‘ಎಫ್' ಬ್ಲಾಕ್‍ನಲ್ಲಿರುವ ತನ್ನ ಕೊಠಡಿಗೆ ವಾಪಸಾಗುವಾಗ ಘಟನೆ ಸಂಭವಿಸಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ಹಾಸ್ಟೆಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ರವಿವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ನಿಲಯ್ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.