ಮಾದಾರ ಚೆನ್ನಯ್ಯ ಸ್ವಾಮೀಜಿ ನಡೆ ಖಂಡಿಸಿದ ಹೋರಾಟಗಾರರ ಮೇಲೆ ಪ್ರಕರಣ : ಸ್ವಾಮೀಜಿಗೆ ಬಹಿರಂಗ ಪತ್ರ ಬರೆದ ಬಿ.ಆರ್.ಭಾಸ್ಕರ್ ಪ್ರಸಾದ್
ಬೆಂಗಳೂರು: ಬಿಜೆಪಿ, ಆರೆಸ್ಸೆಸ್ ಅಣತಿಯಂತೆ ವರ್ತಿಸುತ್ತಿರುವ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆಯಬೇಕೆಂದು ಆಗ್ರಹಿಸಿದ್ದ ಮಾದಿಗ ಸಮುದಾಯದ ಹೋರಾಟಗಾರರ ಮೇಲೆ ಸ್ವಾಮೀಜಿಯ ಆಪ್ತರು ಪ್ರಕರಣಗಳನ್ನು ದಾಖಲಿಸಿದ್ದು, ಈ ನಡೆಯನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್, ಸ್ವಾಮೀಜಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಮಾದಾರ ಚೆನ್ನಯ್ಯ ಸ್ವಾಮೀಜಿ ನಡವಳಿಕೆಯನ್ನು ಧಿಕ್ಕರಿಸಿ ಬಹಿರಂಗ ಪತ್ರದ ಬರೆದಿದ್ದ ಮಾದಿಗ ಸಮುದಾಯದವರೇ ಆದ ಯತಿರಾಜ್ ಬ್ಯಾಲಹಳ್ಳಿ ಹಾಗೂ ಇತರರ ಮೇಲೆ ಸ್ವಾಮೀಜಿಯ ಆಪ್ತರು ಪೊಲೀಸ್ ದೂರುಗಳನ್ನು ನೀಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮುದಾಯದ ಕಾಳಜಿ ಇರುವ ಯಾರೇ ಆದರೂ ಹಿರಿಯರು, ಮಾರ್ಗದರ್ಶಕರೂ ಆದ ನಿಮ್ಮ ಮೇಲೆ ಕೆಲವು ಆರೋಪ ಮಾಡುವ ಮೂಲಕ ಸಮುದಾಯ ಪರವಾದ ಆತಂಕವನ್ನು ವ್ಯಕ್ತಪಡಿಸಿದಾಗ, ತಾವು ಅವರ ಆತಂಕವನ್ನು ಅರ್ಥ ಮಾಡಿಕೊಂಡು ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆಗೆ ಮುಂದಾಗಬೇಕು ಎಂದು ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.
ಯತಿರಾಜ್ ಬ್ಯಾಲಹಳ್ಳಿ ಅವರು ಬರೆದಿರುವ ಬಹಿರಂಗ ಪತ್ರವು ಕೇವಲ ಅವರ ವೈಯಕ್ತಿಕ ಪತ್ರವಾಗಿರುವುದಿಲ್ಲ. ಆ ಪತ್ರ ಮತ್ತು ಅದರಲ್ಲಿ ನಾವು ತಮ್ಮ ಮೇಲೆ ಮಾಡಿರುವ ಆರೋಪ ಹಾಗೂ ಹಕ್ಕೊತ್ತಾಯವು ಸಮುದಾಯ ಪರವಾಗಿ ಚಿಂತಿಸುವ ನಮ್ಮೆಲ್ಲರ ಒಪ್ಪಿಗೆಯಿಂದಲೇ ಬರೆದಿರುವ ಪತ್ರವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಆತಂಕ ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡು ಸ್ವಾಮೀಜಿಯವರು ಕೂಡಲೇ ಮಾತುಕತೆಗೆ ಮುಂದಾಗಬೇಕು ಮತ್ತು ಸಮುದಾಯವನ್ನು ಅಭಿವೃದ್ಧಿಯೆಡೆಗೆ ಒಟ್ಟಿಗೆ ಕೊಂಡೊಯ್ಯುವ ಮನಸ್ಸು ಮಾಡಬೇಕು ಎಂದು ಭಾಸ್ಕರ್ ಪ್ರಸಾದ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೇರೆ ಸಮುದಾಯದ ಮಠಾಧೀಶರ ವಿರುದ್ಧ ಆಯಾ ಸಮುದಾಯದ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರನ್ನು ಕರೆದು ಸ್ವಾಮೀಜಿಗಳು ಮಾತನಾಡುತ್ತಾರಲ್ಲವೇ? ಆತಂಕವೇನೆಂದು ಕೇಳಿ ತಿಳಿದುಕೊಂಡು ಅವರ ಆತಂಕದ ಕಾರಣವನ್ನು ಅರ್ಥ ಮಾಡಿಕೊಂಡು ಸಮಾಲೋಚಿಸಿ ಸಮಾಜವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರಲ್ಲ, ಹಾಗೆಯೇ ತಾವು ಮಾಡಬೇಕಿರುವುದು ಎಂದು ಭಾಸ್ಕರ್ ಪ್ರಸಾದ್, ಸ್ವಾಮೀಜಿಗೆ ಪತ್ರದಲ್ಲಿ ಸಲಹೆ ನೀಡಿದ್ದಾರೆ.