ಕೆಎಸ್ಸಾರ್ಟಿಸಿ ನೌಕರರ ಕುಟುಂಬಕ್ಕೆ ಖರ್ಚಿನ ಮಿತಿಯಿಲ್ಲದ ವೈದ್ಯಕೀಯ ಚಿಕಿತ್ಸೆ : ಸಿಎಂ ಸಿದ್ದರಾಮಯ್ಯ

Update: 2025-01-06 16:56 GMT

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ ‘ಕೆಎಸ್ಸಾರ್ಟಿಸಿ ಆರೋಗ್ಯ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದ್ದಾರೆ.

ನೂತನ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿದ್ದರಾಮಯ್ಯ, ಈ ಯೋಜನೆಯಡಿ ಒಡಬಂಡಿಕೆ ಮಾಡಿಕೊಂಡಿರುವ ಎಲ್ಲಾ ಆಸ್ಪತ್ರೆಗಳು ಕೆಎಸ್ಸಾರ್ಟಿಸಿ ನೌಕರರು ಮತ್ತು ಕುಟುಂಬದವರು ಚಿಕಿತ್ಸೆಗೆ ಬಂದ ಸಂದರ್ಭದಲ್ಲಿ ಅವರನ್ನು ಗೌರವಯುತವಾಗಿ ಹಾಗೂ ಮಾನವೀಯತೆಯಿಂದ ಚಿಕಿತ್ಸೆಯನ್ನು ನೀಡಲು ಮುಂದಾಗಬೇಕು ಎಂದು ತಿಳಿಸಿದರು.

‘ಕೆಎಸ್ಸಾರ್ಟಿಸಿ ಆರೋಗ್ಯ’ ಯೋಜನೆಯಡಿ ಕೆಎಸ್ಸಾರ್ಟಿಸಿ ಎಲ್ಲಾ ನೌಕರರು, ಅವರ ತಂದೆ, ತಾಯಿ ಮತ್ತು ಮಕ್ಕಳಿಗೆ ಯಾವುದೇ ಖಾಯಿಲೆ ಅಥವಾ ಖರ್ಚಿನ ಮಿತಿಯಿಲ್ಲದ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಈ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಇರುವ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 250 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆಯಲ್ಲಿ ಕೆಎಸ್ಸಾರ್ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ನೌಕರರ ಕುಟುಂಬಕ್ಕೆ ನೀಡಲಾಗುವ 1 ಕೋಟಿ ರೂ. ಹಾಗೂ ಸೇವೆಯಲ್ಲಿರುವಾಗ ಮೃತಪಟ್ಟ ನೌಕರರ ಕುಟುಂಬಕ್ಕೆ ನೀಡಲಾಗುವ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಶಾಸಕಿ ನಯನಾ ಮೋಟಮ್ಮ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಾರಿಗೆ ನಿಗಮ ಉಪಾಧ್ಯಕ್ಷ ಮೊಹಮ್ಮದ್ ರಿಝ್ವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News