ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆರೆಸ್ಸೆಸ್ ಕಚೇರಿ ಮುಂದೆಯೇ ಧರಣಿ

Update: 2025-01-06 17:40 GMT

ಬೆಂಗಳೂರು : ವಿವಾದಿತ ಹೇಳಿಕೆ, ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಆರೆಸ್ಸೆಸ್ ಕಚೇರಿ ಮುಂದೆಯೇ ಧರಣಿ ನಡೆಸಿದರು.

ಸೋಮವಾರ ಚಾಮರಾಜಪೇಟೆಯ ಕೇಶವ ಕೃಪಾ ಕಚೇರಿ ಮುಂದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ನಾಯಕರಾದ ಸಿ.ಟಿ.ರವಿ, ಮುನಿರತ್ನ ಬಳಸಿರುವ ಪದ ಹಾಗೂ ಪ್ರಕರಣಗಳ ಬಗ್ಗೆ ಆರೆಸ್ಸೆಸ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸದಾ ವತ್ಸಲೇ ಮಾತೃಭೂಮಿ ಎಂಬ ಆರೆಸ್ಸೆಸ್ ಮಾತು ಹಾಗೂ ತಾಯಂದಿರಿಗೆ ನೀಡುವ ಗೌರವದ ಬಗ್ಗೆ ಈಗ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಆರೆಸ್ಸೆಸ್ ಶಿಸ್ತಿನ ಸಿಪಾಯಿಗಳು ಇದಕ್ಕೆ ಸ್ಪಷ್ಟನೆ ನೀಡಬೇಕು. ತಾವು ಸಂಘದ ಸ್ವಯಂ ಸೇವಕರು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರಾದ ಸಿ.ಟಿ.ರವಿ, ಆರ್.ಅಶೋಕ್ ಬಾಯಲ್ಲಿ ಬರುತ್ತಿರುವ ಅತ್ಯಂತ ಕೆಟ್ಟ ಪದಗಳು ಬರುತ್ತಿದ್ದು, ಶಾಖೆಗಳಲ್ಲಿ ಇಂತಹ ತರಬೇತಿಯನ್ನು ನೀಡಿದ್ದೀರಾ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಮನೋಹರ್ ಕೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದರೂ ಸಹ ಅವರನ್ನು ಸಮರ್ಥಿಸಿಕೊಂಡಿರುವುದು ಆರೆಸ್ಸೆಸ್ ನೀತಿ ಎಂದು ಈಗಾಗಲೇ ಬಹಿರಂಗವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಕ್ಫ್ ಬೋರ್ಡ್ ಹಗರಣ ಮುಚ್ಚಿ ಹಾಕಲು 150 ಕೋಟಿ ರೂ. ಆಮಿಷವೊಡ್ಡಿರುವ ಬಗ್ಗೆ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರೇ ಬಹಿರಂಗಪಡಿಸಿದ್ದಾರೆ. ಇನ್ನೂ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಇದೆ ಎಂಬುದರ ಬಗ್ಗೆ ಈಗಾಗಲೇ ನಿಮ್ಮ ಸಂಘದ ಮತ್ತೊಬ್ಬ ನಿಷ್ಟಾವಂತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಇದರ ಬಗ್ಗೆ ಆರೆಸ್ಸೆಸ್ ನಿಲುವು ಏನೆಂದು ಅವರು ಪ್ರಶ್ನೆ ಮಾಡಿದರು.

ಭ್ರಷ್ಟಾಚಾರದ ಪ್ರಕರಣದಿಂದ ಮುಕ್ತರಾಗಿ ಇವರೆಲ್ಲ ಆರೆಸ್ಸೆಸ್ ಕಚೇರಿಗೆ ಬರಬೇಕೆಂಬ ಆದೇಶವನ್ನು ಹೊರಡಿಸಿದಾಗ ಮಾತ್ರ ಬಿಜೆಪಿಯ ಭ್ರಷ್ಟರಿಗೂ ಆರೆಸ್ಸೆಸ್‍ಗೂ ಅಂತರ ಕಡಿಮೆ ಇದೆ ಎಂಬುದು ಸಾಬೀತಾಗುತ್ತದೆ. ಇಲ್ಲದೇ ಹೋದ ಪಕ್ಷದಲ್ಲಿ ಆರೆಸ್ಸೆಸ್ ಸಂಸ್ಥೆಯೇ ಈ ಭ್ರಷ್ಟರಿಗೂ ನೈತಿಕ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆವಿ ಗೌತಮ್, ಮಂಜುನಾಥ್, ಕೆಪಿಸಿಸಿ ಪದಾಧಿಕಾರಿಗಳಾದ, ಅಮರೇಶ್ ಪಾಪಣ್ಣ, ಡಾ.ಶಂಕರ್ ಗುಹಾ ಸೇರಿದಂತೆ ಪ್ರಮುಖರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News