ವಿಧಾನಸಭೆಯಲ್ಲಿ ಹೈಡ್ರಾಮಾ; ಬಜೆಟ್ ಪ್ರತಿ ಹರಿದು ಸ್ಪೀಕರ್ ಪೀಠದತ್ತ ಎಸೆದ ಪ್ರತಿಪಕ್ಷಗಳ ಸದಸ್ಯರು

ಬೆಂಗಳೂರು : ‘ಹನಿಟ್ರ್ಯಾಪ್’ ಪ್ರಕರಣದ ತನಿಖೆ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರಿಂದ ನಡೆಸಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಭಾವಿಗಿಳಿದು ಪ್ರತಿಭಟನೆ ನಡೆಸಿದ್ದು, ವಿಧಾನಸಭೆ ಕಲಾಪ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು.
ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಧೀರ್ಘ ಉತ್ತರ ನೀಡಿಲು ಮುಂದಾದರು. ಈ ವೇಳೆ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಗೆ ವಹಿಸಬೇಕು’ ಎಂದು ಪಟ್ಟು ಹಿಡಿದರು.
ಈ ವೇಳೆ ಸಿಎಂ ಇದಕ್ಕೆ ಮೊದಲು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷ ಸದಸ್ಯರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದಕ್ಕೆ ಕಿವಿಗೂಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತ ಉತ್ತರ ಮಂಡಿಸಿದರು. ಆಬಳಿಕ ಬಜೆಟ್ ಅಂಗೀಕಾರ ನೀಡುವಂತೆ ಸದನವನ್ನು ಕೋರಿದರು.
ಆಗ ಸ್ಪೀಕರ್ ಯು.ಟಿ.ಖಾದರ್, ‘2025-26ನೇ ಸಾಲಿನ ಹಣಕಾಸು ಮಸೂದೆ ಅಂಗೀಕರಿಸಲು ಮುಂದಾದಾಗ ವಿಪಕ್ಷ ನಾಯಕ ಆರ್.ಅಶೋಕ್, ‘ರಾಜ್ಯದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಸ್ಲಿಮರಿಗೆ ಸರಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿರುವುದು ಸಲ್ಲ, ಇದು ರಾಜ್ಯಕ್ಕೆ ಮಾಡಿರುವ ದ್ರೋಹ. ಈ ಅಪರಾಧವನ್ನು ಜನ ಕ್ಷಮಿಸುವುದಿಲ್ಲ. ಹನಿಟ್ರಾಪ್ ಬಗ್ಗೆ ಆರೋಪವಿದ್ದರೂ ಕಡೆಗಣಿಸಲಾಗುತ್ತಿದೆ’ ಎಂದು ದೂರಿದರು.
ಈ ಮಧ್ಯೆ ಸ್ಪೀಕರ್ ಖಾದರ್, ‘ಬಜೆಟ್‍ನ್ನೊಳಗೊಂಡ ವಿತ್ತೀಯ ವಿಧೇಯಕ ಅಂಗೀಕಾರವಾಗಿದೆ’ ಎಂದು ಪ್ರಕಟಿಸಿದರು. ಇದರಿಂದ ಕೆರಳಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಪೀಠದತ್ತ ತೂರಿದರು. ಅಲ್ಲದೆ, ಸ್ಪೀಕರ್ ಪೀಠಕ್ಕೆ ನುಗ್ಗಿ ಖಾದರ್ ಅವರನ್ನು ಸತ್ತುವರಿದು ಕಾಗದ ಪತ್ರಗಳನ್ನು ಹರಿದು ತೂರಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾರ್ಷಲ್‍ಗಳು ಸ್ಪೀಕರ್ ರಕ್ಷಣೆಗೆ ಧಾವಿಸಲು ಪ್ರಯತ್ನಿಸಿದರು. ಆದರೆ, ಸ್ಪೀಕರ್ ಮಾರ್ಷಲ್‍ಗಳನ್ನು ಮುಂದೆ ಬರದಂತೆ ಸೂಚನೆ ನೀಡಿದರು. ಬಿಜೆಪಿ ಸದಸ್ಯರಾದ ಮುನಿರತ್ನ, ಸಿ.ಕೆ.ರಾಮಮೂರ್ತಿ ಸೇರಿದಂತೆ ಹಲವು ಸದಸ್ಯರು ತಮ್ಮ ಕೈಯಲ್ಲಿ ಸಿಡಿಗಳನ್ನು ಹಿಡಿದು ಸ್ಪೀಕರ್ ಬಳಿಯೇ ನಿಂತು ಘೋಷಣೆ ಹಾಕಿದರು.
ಸ್ಪೀಕರ್ ಪೀಠ ಬಿಟ್ಟು ಕೆಳಗಿಳಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಭಾರೀ ಸೂಚನೆ ನೀಡಿದರು. ‘ಸದಸ್ಯರು ಕೆಳಗೆ ಬರಬೇಕು, ಇಲ್ಲವಾದರೆ ಮಾರ್ಷಲ್‍ಗಳು ತಳ್ಳುತ್ತಾರೆ. ನಿಮಗೆ ತಳ್ಳಿಸಿಕೊಳ್ಳಲು ಆಸೆಯೇ?’ ಎಂದು ಸಿದ್ದರಾಮಯ್ಯ ಬುದ್ದಿವಾದ ಹೇಳಿದರೂ, ಯಾರೊಬ್ಬರು ಇದಕ್ಕೆ ಕಿವಿಗೂಡದೆ ಗದ್ದಲದಲ್ಲಿ ತೊಡಗಿದ್ದರು.
ಕೆಲ ಸದಸ್ಯರು ಪೀಠದ ಕಡೆ ಹಾಗೂ ಅಡಳಿತ ಪಕ್ಷದವರ ಕಡೆಗೆ ಕಾಗದ ಪತ್ರಗಳನ್ನು ಹರಿದು ಎಸೆಯುತ್ತಿದ್ದರು. ಸಿಎಂ ಕೆಲವು ಕಾಗದ ಪತ್ರಗಳು ತಗುಲಿದವು. ಆಗ ಸಚಿವ ಭೈರತಿ ಸುರೇಶ್, ಸದಸ್ಯರಾದ ರಂಗನಾಥ್, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಸಿಎಂ ಸುತ್ತಲೂ ನಿಂತರು.
ವಾಗ್ವಾದ: ‘ನೀವೇನೂ ರೌಡಿಗಳೇ? ಹೊಡೆಯುತ್ತೀರಾ ಬನ್ನಿ ನೋಡೋಣ’ ಎಂದೆಲ್ಲಾ ಆರೋಪ- ಪ್ರತ್ಯಾರೋಪ, ವಾಗ್ವಾದಗಳು ವಿನಿಮಯವಾದವು. ಪರಸ್ಪರ ತೋಳೆರಿಸಿರುವ ಸ್ಥಿತಿ ನಿರ್ಮಾಣವಾಯಿತು.
ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ವಿಪಕ್ಷಗಳ ಎಲ್ಲ ಸದಸ್ಯರು ಸದನದ ಬಾವಿಗೆ ಇಳಿದರು. ಹೀಗಾಗಿ ಸದನದ ಹೊರಗಿದ್ದ ದೊಡ್ಡಸಂಖ್ಯೆಯಲ್ಲಿ ಮಾರ್ಷಲ್‍ಗಳು ಒಳಗೆ ಧಾವಿಸಿ ರಕ್ಷಣೆಗೆ ನಿಂತರು. ಇತ್ತ ಸಿಎಂ ಬಳಿಯೂ ಗದ್ದಲ ಹೆಚ್ಚಾದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿ ಬಳಿ ನಿಂತಿದ್ದ ಸಚಿವ ಭೈರತಿ ಸುರೇಶ್ ಸಿಟ್ಟಿನಿಂದ ಕಿರು ಪುಸ್ತಕವನ್ನು ವಿಪಕ್ಷ ಸದಸ್ಯರತ್ತ ಎಸೆದು ಆಕ್ರೋಶ ಹೊರಹಾಕಿದರು.
ಈ ಮಧ್ಯೆ ಸ್ಪೀಕರ್ ಖಾದರ್, ‘ಮುಖ್ಯಮಂತ್ರಿ, ಮಂತ್ರಿಗಳು ಸೇರಿದಂತೆ ಶಾಸಕರ ವೇತನ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎರಡು ವಿಧೇಯಕಗಳನ್ನು ಹಾಗೂ ಕರ್ನಾಟಕ ಧನವಿನಿಯೋಗ ವಿಧೇಯಕ’ವನ್ನು ಮಂಡಿಸಿ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು. ಆ ಬಳಿಕ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಧಮ್ ಇದ್ದರೆ ಮುಟ್ಟು ಬಾರಲೇ..: ‘ಬಾರಲೇ ಹೊಡಿಬಾರಲೇ ನಿನಗೆ ಧಮ್ ಇದ್ದರೆ ನನ್ನನ್ನು ಮುಟ್ಟಿನೋಡು’ ಎಂದು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಏರಿದ ಧ್ವನಿಯಲ್ಲಿ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋದರು. ಅಲ್ಲದೆ, ಸ್ಪೀಕರ್ ಪೀಠಕ್ಕೆ ನುಗ್ಗಿ ಸ್ಪೀಕರ್ ಖಾದರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಕಾಗದ ಪತ್ರಗಳನ್ನು ಹರಿದು, ತೂರಿ ಸ್ಪೀಕರ್ ಹಾಗೂ ಆಡಳಿತ ಪಕ್ಷದ ಸದಸ್ಯರ ಮೇಲೆ ಎಸೆದ ಪ್ರಸಂಗವು ನಡೆಯಿತು’