ವಿಧಾನಸಭೆ ಅಧಿವೇಶನ : ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Update: 2025-03-21 20:20 IST
ವಿಧಾನಸಭೆ ಅಧಿವೇಶನ : ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
  • whatsapp icon

ಬೆಂಗಳೂರು : ವಿಧಾನಸಭೆಯ ಆರನೇ ಅಧಿವೇಶನವು ಮಾ.3 ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ ಸುಮಾರು 99 ಗಂಟೆ 34 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಸಕ್ತ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಯನ್ನು ಪ್ರಕಟಿಸಿದ ಅವರು, ಮಾ.3ರಂದು ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದರು. ಅವರ ಭಾಷಣದ ವಂದನಾ ನಿರ್ಣಯದಲ್ಲಿ 14 ಸದಸ್ಯರು 8 ಗಂಟೆ 2 ನಿಮಿಷಗಳ ಕಾಲ ಭಾಗವಹಿಸಿದ್ದು, ವಂದನಾ ನಿರ್ಣಯದ ಪ್ರಸ್ತಾವವನ್ನು ಮಾ.17ರಂದು ಅಂಗೀಕರಿಸಲಾಗಿದೆ ಎಂದು ಹೇಳಿದರು.

2025-26ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7ರಂದು ಮಂಡಿಸಿದರು. ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 80 ಸದಸ್ಯರು 28 ಗಂಟೆ 56 ನಿಮಿಷಗಳ ಕಾಲ ಭಾಗವಹಿಸಿದ್ದು, ಮಾ.21ರಂದು ಮುಖ್ಯಮಂತ್ರಿ ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು ಎಂದು ಅವರು ತಿಳಿಸಿದರು.

2024-25ನೇ ಸಾಲಿನ ಪೂರಕ ಅಂದಾಜುಗಳ(ಮೂರನೇ ಹಾಗೂ ಅಂತಿಮ ಕಂತು) ಬೇಡಿಕೆಗಳನ್ನು ಮಾ.19ರಂದು ಮಂಡಿಸಿ, ಮಾ.21ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಇತ್ತೀಚಿಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲಿನ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಖಾದರ್ ಹೇಳಿದರು.

2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ, ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ವರದಿ, ವಿಧಾನಸಭೆ ಸದಸ್ಯರ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2024-25ನೇ ಸಾಲಿನ ಐದನೇ ವರದಿ, ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ನಾಲ್ಕನೇ ವರದಿ ಹಾಗೂ ವಿಧಾನಸಭೆಯ ಅಂದಾಜುಗಳ ಸಮಿತಿಯ 2024-25ನೇ ಸಾಲಿನ ಎರಡನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ತಿಳಿಸಿದರು.

12 ಅಧಿಸೂಚನೆಗಳು, 2 ಅಧ್ಯಾದೇಶಗಳು ಮತ್ತು 122 ವಾರ್ಷಿಕ ವರದಿಗಳು, 111 ಲೆಕ್ಕ ಪರಿಶೋಧನಾ ವರದಿಗಳು, 1 ಅನುಪಾಲನ ವರದಿಗಳು ಹಾಗೂ 1 ಅನುಸರಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಧನವಿನಿಯೋಗ ವಿಧೇಯಕಗಳು ಸೇರಿದಂತೆ ಒಟ್ಟು 27 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.

ವಿಧಾನಸಭೆಯಲ್ಲಿ ಮಂಡಿಸಿದಂತೆ, ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ, ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ನಿಯಮ 60ರಡಿಯಲ್ಲಿ ನೀಡಿದ್ದ 3 ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದನ್ನು ಸೇರಿದಂತೆ 4 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ಒಟ್ಟು 50 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. 3096 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 195 ಪ್ರಶ್ನೆಗಳ ಪೈಕಿ 189 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 2583 ಪ್ರಶ್ನೆಗಳ ಪೈಕಿ 2190 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351ರಡಿಯಲ್ಲಿ ಸ್ವೀಕೃತವಾದ 260 ಸೂಚನೆಗಳ ಪೈಕಿ 133 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ನುಡಿದರು.

ಗಮನ ಸೆಳೆಯುವ 388 ಸೂಚನೆಗಳ ಪೈಕಿ 175 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಎಚ್.ಕೆ.ಸುರೇಶ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ನೀಡಿರುವ 2 ಖಾಸಗಿ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಎರಡು ಹಕ್ಕುಚ್ಯುತಿ ಸೂಚನೆಗಳನ್ನು ತನಿಖೆ, ಪರಿಶೀಲನೆ ಮತ್ತು ವರದಿಗಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ವಹಿಸಲಾಗಿದೆ. ಶೂನ್ಯ ವೇಳೆ ಅಡಿಯಲ್ಲಿ 14 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.

ನಾಲ್ಕು ನಿರ್ಣಯಗಳ ಅಂಗೀಕಾರ: ಸರಕಾರಿ ಭದ್ರತಾ ಪತ್ರಗಳ ಅಧಿನಿಯಮ, 2006 ಮತ್ತು ಸಾರ್ವಜನಿಕ ಋಣ ಅಧಿನಿಯಮ, 1944ರ ನಿರಸನದ ಪ್ರಸ್ತಾವನೆಗೆ ಸಂಸತ್ತು ಮಾಡಿರುವ ತಿದ್ದುಪಡಿಗೆ ಈ ಸದನದ ಯಾವುದೇ ಆಕ್ಷೇಪಣೆ ಇಲ್ಲ ಎಂದು ನಿರ್ಣಯ ಅಂಗೀಕರಿಸಲಾಯಿತು ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಮುಂಗಡ ಪತ್ರದ ಒಂದು ಭಾಗವನ್ನು ಕೇವಲ ಅದೇ ಉದ್ದೇಶಕ್ಕಾಗಿ ಮೀಸಲಿಡುವಂತೆ ಒತ್ತಾಯಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ಅವರು ಹೇಳಿದರು.

ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿರುವ ಕೇಂದ್ರ ಸರಕಾರದ ವಕ್ಫ್(ತಿದ್ದುಪಡಿ) ಮಸೂದೆ, 2024 ಅನ್ನು ಹಿಂಪಡೆಯುವಂತೆ ನಿರ್ಣಯ ಅಂಗೀಕರಿಸಲಾಯಿತು ಎಂದು ಖಾದರ್ ತಿಳಿಸಿದರು.

ಅಲ್ಲದೇ, ಯೂನಿವರ್ಸಿಟಿ ಗ್ರಾಂಟ್ಸ್ ಕಮೀಷನ್ (ಮಿನಿಮಮ್ ಕ್ವಾಲಿಫಿಕೇಷನ್ಸ್ ಫಾರ್ ಅಪಾಯಿಂಟ್‍ಮೆಂಟ್ ಅಂಡ್ ಪ್ರಮೋಷನ್ ಆಫ್ ಟೀಚರ್ಸ್ ಅಂಡ್ ಅಕಾಡೆಮಿಕ್ ಸ್ಟಾಫ್ ಇನ್ ಯುನಿವರ್ಸಿಟೀಸ್ ಅಂಡ್ ಕಾಲೇಜಸ್ ಅಂಡ್ ಮೆಷರ್ಸ್ ಫಾರ್ ದ ಮೆಂಟೈನೆನ್ಸ್ ಆಫ್ ಸ್ಟಾಂಡಡ್ರ್ಸ್ ಇನ್ ಹೈಯರ್ ಎಜುಕೇಷನ್) ರೆಗುಲೇಷನ್ಸ್, 2025 ಅನ್ನು ಹಿಂಪಡೆಯಲು ನಿರ್ಣಯ ಅಂಗೀಕರಿಸಲಾಯಿತು ಎಂದು ಅವರು ಹೇಳಿದರು.

18 ಸದಸ್ಯರ ಅಮಾನತು: ಮಾ.21ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೆ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ 18 ಜನ ವಿಧಾನಸಭಾ ಸದಸ್ಯರನ್ನು 6 ತಿಂಗಳುಗಳ ಅವಧಿಯವರೆಗೆ ಸದನಕ್ಕೆ ಬಾರದಂತೆ ತಡೆ ಹಿಡಿದು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು. ಆನಂತರ, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News