ಸ್ಪೀಕರ್ ಪೀಠಕ್ಕೆ ಅಗೌರವ : ವಿಧಾನಸಭೆ ಕಲಾಪದಿಂದ 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು

ಬೆಂಗಳೂರು : ಸ್ಪೀಕರ್ ಪೀಠದ ಆದೇಶವನ್ನು ಲೆಕ್ಕಿಸದೆ ಸದನದ ಕಾರ್ಯ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತು ಹಾಗೂ ಅಗೌರವದಿಂದ ನಡೆದುಕೊಂಡ ಪ್ರತಿಪಕ್ಷ ಬಿಜೆಪಿಯ 18 ಮಂದಿ ಶಾಸಕರನ್ನು ಆರು ತಿಂಗಳ ಕಾಲ ಸದನಕ್ಕೆ ಬಾರದಂತೆ ಅಮಾನತುಗೊಳಿಸಿ ಸ್ಪೀಕರ್ ಯು.ಟಿ. ಖಾದರ್ ಶುಕ್ರವಾರ ವಿಧಾನಸಭೆಯಲ್ಲಿ ರೂಲಿಂಗ್ ನೀಡಿದರು.
ಅಮಾನತುಗೊಂಡ ಶಾಸಕರು: ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್(ಕುಷ್ಟಗಿ), ಡಾ.ಸಿ.ಎನ್.ಅಶ್ವತ್ಥ ನಾರಾಯಣ(ಮಲ್ಲೇಶ್ವರಂ), ಎಸ್.ಆರ್.ವಿಶ್ವನಾಥ್ (ಯಲಹಂಕ), ಬಿ.ಎ.ಬಸವರಾಜ (ಕೆ.ಆರ್.ಪುರ), ಎಂ.ಆರ್.ಪಾಟೀಲ್(ಕುಂದಗೋಳ), ಎಸ್.ಎಸ್.ಚನ್ನಬಸಪ್ಪ(ಚನ್ನಿ-ಶಿವಮೊಗ್ಗ), ಉಮಾನಾಥ್ ಕೋಟ್ಯಾನ್(ಮೂಡಬಿದ್ರಿ), ಬಿ.ಸುರೇಶ್ ಗೌಡ(ತುಮಕೂರು ಗ್ರಾಮಾಂತರ), ಡಾ.ಶೈಲೇಂದ್ರ ಬೆಲ್ದಾಳೆ(ಬೀದರ್ ದಕ್ಷಿಣ).
ಶರಣು ಸಲಗರ(ಬಸವಕಲ್ಯಾಣ), ಸಿ.ಕೆ.ರಾಮಮೂರ್ತಿ(ಜಯನಗರ), ಯಶ್‍ಪಾಲ್ ಸುವರ್ಣ(ಉಡುಪಿ), ಬಿ.ಪಿ.ಹರೀಶ್(ಹರಿಹರ), ಮುನಿರತ್ನ(ರಾಜರಾಜೇಶ್ವರಿ ನಗರ), ಡಾ.ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್(ಕಲಬುರಗಿ ಗ್ರಾಮಾಂತರ), ಡಾ.ಚಂದ್ರು ಲಮಾಣಿ(ಶಿರಹಟ್ಟಿ) ಹಾಗೂ ಧೀರಜ್ ಮುನಿರಾಜು(ದೊಡ್ಡಬಳ್ಳಾಪುರ) ಅವರನ್ನು ಆರು ತಿಂಗಳ ಕಾಲ ಸ್ಪೀಕರ್ ಅಮಾನತುಗೊಳಿಸಿದರು.
ಅಮಾನತು ಅವಧಿಯಲ್ಲಿ ಈ ಮೇಲ್ಕಂಡ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ. ಅವರು ಸದಸ್ಯರಾಗಿರುವ ವಿಧಾನಮಂಡಲದ, ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ. ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡುವಂತಿಲ್ಲ.
ಅಮಾನತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರು ಮತದಾನ ಮಾಡುವಂತಿಲ್ಲ. ಅಲ್ಲದೇ, ಈ ಅವಧಿಯಲ್ಲಿ ಅವರು ಯಾವುದೆ ದಿನಭತ್ತೆಯನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.