ಮಂತ್ರಿ, ಶಾಸಕರ ವೇತನ, ಭತ್ಯೆ ಹೆಚ್ಚಳ ವಿಧೇಯಕಗಳಿಗೆ ಅನುಮೋದನೆ

ಬೆಂಗಳೂರು : ಪ್ರತಿಪಕ್ಷಗಳ ಗದ್ದಲ, ಕೋಲಾಹಲದ ನಡುವೆಯೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಶಾಸಕರ ಸಂಬಳ ಮತ್ತು ಮನೆಬಾಡಿಗೆ, ಆತಿಥ್ಯ, ವಾಹನ ಭತ್ಯೆಯನ್ನು ದ್ವಿಗುಣಗೊಳಿಸುವ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2025 ಹಾಗೂ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು(ತಿದ್ದುಪಡಿ) ವಿಧೇಯಕ-2025’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಶುಕ್ರವಾರ ವಿಧಾನಸಭೆಯಲ್ಲಿ ‘ಹನಿಟ್ರ್ಯಾಪ್’ ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸ್ಪೀಕರ್ ಯು.ಟಿ.ಖಾದರ್ ಪೀಠದ ಬಳಿಗೆ ನುಗ್ಗಿ ಗದ್ದಲ ಸೃಷ್ಟಿಸಿದರು. ಈ ಸಂದರ್ಭದಲ್ಲೇ ಸಿಎಂ, ಸಚಿವರು ಹಾಗೂ ಶಾಸಕರ ವೇತನ, ಭತ್ಯೆ ಹೆಚ್ಚಳದ ವಿಧೇಯಕವನ್ನು ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಯಿತು.
ವೇತನ ಶೇ.100ರಷ್ಟು ಹೆಚ್ಚಳ: ಈ ನೂತನ ಮಸೂದೆ ಜಾರಿಯಿಂದ ಮುಖ್ಯಮಂತ್ರಿ, ಸಚಿವರು ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಎಲ್ಲ ಶಾಸಕರ ವೇತನ, ಭತ್ಯೆ ಹೆಚ್ಚಳವಾಗಿದೆ. ಶೇ.100ರಷ್ಟು ಸಂಬಳ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸಿಎಂ, ಸಚಿವರು, ಶಾಸಕರ ಸಂಬಳ ಶೇ.100ರಷ್ಟು ಹೆಚ್ಚಾಗಿದೆ.
2022ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಿಸಿತ್ತು. ಇದೀಗ ಮಂಡಿಸಲಾಗಿದ್ದ ತಿದ್ದುಪಡಿ ವಿಧೇಯಕದಲ್ಲಿ, ‘ಪ್ರಸ್ತುತ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜೀವನ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮಂತ್ರಿಗಳ ಸಂಬಳ ಮತ್ತು ಭತ್ಯೆಗಳನ್ನು ದೀರ್ಘಕಾಲದಿಂದ ಪರಿಷ್ಕರಿಸಿರುವುದಿಲ್ಲ. ಆದುದರಿಂದ, ಸಂಬಳ, ಮನೆಬಾಡಿಗೆ ಭತ್ಯೆ, ಆತಿಥ್ಯ ಭತ್ಯೆ, ವಾಹನ ಭತ್ಯೆಗಳು ಇತ್ಯಾದಿಗಳ ಪರಿಷ್ಕರಣೆಗಾಗಿ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
2023ರ ಎಪ್ರಿಲ್ 1ರಿಂದ 5 ವರ್ಷಕ್ಕೊಮ್ಮೆ ವೇತನ ವೇತನ ಹೆಚ್ಚಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದೀಗ 2 ವರ್ಷ ಪೂರ್ಣವಾಗುವ ಮೊದಲೇ ಶಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಗಿದೆ.
ಯಾರಿಗೆ ಎಷ್ಟು ವೇತನ: ಮುಖ್ಯಮಂತ್ರಿ ವೇತನ ತಿಂಗಳಿಗೆ 75 ಸಾವಿರ ರೂ.ನಿಂದ 1.50 ಲಕ್ಷ ರೂ.ಗೆ ಏರಿಕೆಯಾಗಲಿದೆ. ಇದು ಶೇ.100ರ ಹೆಚ್ಚಳ. ಸಚಿವರ ವೇತನ 60 ಸಾವಿರ ರೂ.ನಿಂದ 1.25ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಶಾಸಕರು ಹಾಗೂ ಪ್ರತಿಪಕ್ಷ ನಾಯಕರ ವೇತನ 80 ಸಾವಿರ ರೂ.ಗೆ ಏರಿಕೆಯಾಗಲಿದೆ. ಸಚಿವರ ಮನೆಬಾಡಿಗೆ ಭತ್ಯೆ 2.50ಲಕ್ಷ ರೂ.ಗೆ ಹೆಚ್ಚಾಗಲಿದೆ.
ಶಾಸಕರ ವೇತನ ಎಷ್ಟು?: ಶಾಸಕರು ಮತ್ತು ಪರಿಷತ್ ಸದಸ್ಯರ ವೇತನ ಮಾಸಿಕ 40 ಸಾವಿರ ರೂ.ನಿಂದ 80 ಸಾವಿರ ರೂ.ಗೆ ಹೆಚ್ಚಳವಾಗಿದೆ. ಸ್ಪೀಕರ್ ಮತ್ತು ಪರಿಷತ್ ಸಭಾಪತಿ ವೇತನ 75 ಸಾವಿರ ರೂ.ನಿಂದ 1.25ಲಕ್ಷ ರೂ.ವರೆಗೆ ಏರಿಕೆಯಾಗಲಿದೆ. ಮುಖ್ಯಮಂತ್ರಿ, ಸಚಿವರಿಗೆ ಆತಿಥ್ಯ ಭತ್ಯೆ-4.50ಲಕ್ಷ ರೂ.ನಿಂದ 5 ಲಕ್ಷ ರೂ.ಗಳ ವರೆಗೆ. ಸಚಿವರಿಗೆ ಮನೆ ಬಾಡಿಗೆ ಭತ್ಯೆ-1.20 ಲಕ್ಷ ರೂ.ನಿಂದ 2.50 ಲಕ್ಷ ರೂ.ಗಳ ವರೆಗೆ ಹೆಚ್ಚಳವಾಗಲಿದೆ. ರಾಜ್ಯ ಸಚಿವರ ವೇತನ-50 ಸಾವಿರ ರೂ.ನಿಂದ 75 ಸಾವಿರ ರೂ.ಗಳ ವರೆಗೆ ಹಾಗೂ ರಾಜ್ಯ ಸಚಿವರಿಗೆ ಮನೆಬಾಡಿಗೆ ಭತ್ಯೆ-1.20 ಲಕ್ಷ ರೂ.ನಿಂದ 2ಲಕ್ಷ ರೂ.ಗಳ ವರೆಗೆ ಹೆಚ್ಚಳವಾಗಲಿದೆ.