ಸಮಾಜ ಸಾಂಸ್ಕೃತಿಕವಾಗಿ ಒಡೆದು ಹೋಳಾಗಿದೆ : ಡಾ.ಮೂಡ್ನಾಕೂಡು ಚಿನ್ನಸ್ವಾಮಿ

Update: 2025-01-05 16:21 GMT

ಬೆಂಗಳೂರು : ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಸಮಾಜ ಸಾಂಸ್ಕೃತಿಕವಾಗಿ ಒಡೆದು ಎರಡು ಹೋಳಾಗಿದೆ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ‘ನ್ಯಾಯ ಸ್ಪಂದನ ಬೆಂಗಳೂರು ಹಾಗೂ ಓದು ಗೆಳೆಯರ ಬಳಗ ಬಾಗಲಕೋಟೆ’ ಇವರ ಸಹಯೋಗದಲ್ಲಿ ಲೇಖಕ ಅನಿಲ್ ಗುನ್ನಾಪುರ ರಚಿಸಿರುವ ‘ಸರ್ವೇ ನಂಬರ್-97’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಒಂದು ಕಡೆ ಕೋಮುವಾದ ಮತ್ತು ಜಾತಿವಾದ ಬಲಗೊಳಿಸುತ್ತಿರುವ ವರ್ಗ, ಮತ್ತೊಂದು ಜಾತ್ಯತೀತತೆ ಮತ್ತು ಸಮಾನತೆಯನ್ನು ಪ್ರತಿಪಾದಿಸುತ್ತಿರುವ ವರ್ಗಗಳಿವೆ ಎಂದು ಹೇಳಿದರು.

ಈ ಎರಡು ವರ್ಗಗಳು ಯಾವಾಗಲೂ ಸಂಘರ್ಷದಲ್ಲಿರುತ್ತವೆ. ಆದರೆ ಅಷ್ಟೇ ತೀವ್ರವಾದ ಕಥೆ-ಕವನಗಳು ಇಂದು ಬರುತ್ತಿಲ್ಲ. ಸಮಾಜವನ್ನು ಮುನ್ನಲೆಗೆ ತರುವಂತಹ, ಯಾವ ಕಥೆ, ಕವನಗಳಾಗಲಿ ಕಾಣಿಸುತ್ತಿಲ್ಲ. ಸಮಾಜದಲ್ಲಿ ಎಷ್ಟು ಏರುಪೇರಾಗಿದೆ ಎಂದರೆ ದೇಶದ ಜನಸಂಖ್ಯೆ 140 ಕೋಟಿಯಷ್ಟಿದೆ. ಮೂರು ಭಾರತದಲ್ಲಿ ನಾವಿದ್ದೇವೆಂದು ತಜ್ಞರು ಒಬ್ಬರು ಹೇಳುತ್ತಾರೆ ಎಂದರು.

ಅತ್ಯಂತ ಶ್ರೀಮಂತಿಕೆಯಲ್ಲಿರುವ ಭಾರತ, ಮಧ್ಯಮ ವರ್ಗದ ಭಾರತ, ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಕಡುಬಡತನದ ಭಾರತ ಇದೆ. ಮೇಲಿನ 12 ಕೋಟಿ ಜನ ಅತ್ಯಂತ ಶ್ರೀಮಂತರು, ಅವರೆಲ್ಲರೂ ಐಷಾರಾಮಿ ಕಾರುಗಳಲ್ಲಿ ಎಲ್ಲ ಸವಲತ್ತುಗಳನ್ನು ಪಡೆದುಕೊಂಡಿರುವರು. ಇನ್ನೂ 28 ಕೋಟಿ ಜನ ಮಧ್ಯಮ ವರ್ಗದವರು, ಅವರು ಮಹತ್ವಕಾಂಕ್ಷಿ ವರ್ಗ. ಇನ್ನು ಕೊನೆಯ 100 ಕೋಟಿ ಜನ ಆಫ್ರಿಕಾ ಖಂಡದ ಸಬ್‍ಸಹಾರ ದೇಶಗಳ ಆದಾಯಕ್ಕಿಂತ ಮತ್ತು ದಿನಕ್ಕೆ 2 ಡಾಲರ್‌ ಗಿಂತಗಲೂ ಕಡಿಮೆ ದುಡಿಯುತ್ತಿರುವ ಜನ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಮಾಹಿತಿ ನೀಡಿದರು.

ಸಮಾಜದಲ್ಲಿ ಇಷ್ಟೊಂದು ಅಗಾದವಾದ ಕಂದಕ, ಬಡತನ ಇದ್ದರೂ ಕೂಡ ನಮ್ಮ ರಾಜಕಾರಣಿಗಳು ಅತ್ಯಂತ ಸಂಭ್ರಮದಿಂದ ಐದನೇ ದೊಡ್ಡ ಆರ್ಥಿಕತೆ ನಮ್ಮದು ಎಂದು ಹೇಳುತ್ತಾರೆ. ಇದರಲ್ಲಿ ಏನು ಅರ್ಥವೇ ಇಲ್ಲ. ತಲಾ ಆದಾಯ ನೋಡುತ್ತಿದ್ದರೆ, ಜನಸಂಖ್ಯೆಯಲ್ಲಿ ಒಂದನೇ ಸ್ಥಾನದಲ್ಲಿರುವ ದೊಡ್ಡ ದೇಶ ನಮ್ಮದು. ಆದಾಯದಲ್ಲಿ 140ನೆ ಸ್ಥಾನಕ್ಕೆ ಹೋಗಿದೆ. ಅದರ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ, ಮಾತನಾಡುತ್ತಿನಲ್ಲ, ನಾಚಿಕೆಯೂ ಪಡುತ್ತಿಲ್ಲ. ಇದನ್ನು ರಾಜಕಾರಣಿಗಳು ಮತ್ತು ಸಮಾಜಶಾಸ್ತ್ರಜ್ಞರು ಯೋಚನೆ ಮಾಡಬೇಕಾಗಿರುವ ವಿಷಯ ಎಂದು ಅವರು ತಿಳಿಸಿದರು.

ಸಣ್ಣಕಥೆ ಎಂದರೆ ಓದುವುದಕ್ಕೆ ಅರ್ಧಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳುವ ಸಂಕ್ಷಿಪ್ತವಾದ ಗದ್ಯ. ನಿರೂಪಣೆಯ ಎಲ್ಲ ಕಥೆಗಳು ಅರ್ಧಗಂಟೆ ಒಳಗೆ ಓದಬಹುದು. ಈ ನಿರೂಪಣೆ ಮತ್ತು ಭಾಷೆಯಲ್ಲಿ ಲೇಖಕ ಮೊದಲನೇ ಸಂಕಲನದಲ್ಲಿಯೇ, ಯಶಸ್ಸು ಪಡೆದುಕೊಂಡಿದ್ದಾರೆ. ಎಲ್ಲೂ ಸಿಕ್ಕುಗಳಿಲ್ಲದೆ ಸರಳವಾಗಿ ಓದಿಸಿಕೊಂಡು ಹೋಗುವ ರೀತಿಯಲ್ಲಿ ಬರೆದಿದ್ದಾರೆ. ಕಥೆ-ಕವನ ಆಗಲಿ ಅದರ ಕೊನೆ ಮಾತ್ರ ಪರಿಣಾಮಕಾರಿಯಾಗಿರಬೇಕು. ಆಗಲೇ ಓದುಗರಿಗೆ ವಿಷಯ ತಟ್ಟುವುದು. ಅಂತಹ ಪರಿಣಾಮಕಾರಿಯಾದ ಕೊನೆಯನ್ನು ಲೇಖಕ ಕೊಟ್ಟಿದ್ದಾರೆ ಎಂದು ಮುಡ್ನಾಕೂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲೇಖಕರಾದ ಜ.ನಾ.ತೇಜಶ್ರೀ, ಅನಿಲ್ ಗುನ್ನಾಪುರ, ವಿಶ್ಲೇಷಕ ವಸುಧೇಂದ್ರ ಉಪಸ್ಥಿತರಿದ್ದರು.

‘ಒಬ್ಬ ಕಥೆಗಾರ ಸಾಹಿತ್ಯಕವಾಗಿ ಕಥೆಗಳನ್ನು ಕಟ್ಟುವಲ್ಲಿ ತನ್ನದೇ ಆದ ಶೈಲಿಯನ್ನು ಉಪಯೋಗಿಸಬೇಕು. ತಾನು ಬರೆಯುವ ಕಥೆಗಳಲ್ಲಿ ಸಾಮಾಜಿಕ ಕಳಕಳಿ ಇರಬೇಕು, ಸಮಾಜಕ್ಕೆ ಮಾಹಿತಿ ನೀಡಬೇಕು. ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಅನಿಲ್ ಗುನ್ನಾಪುರ ತಮ್ಮ ಬರಹಗಳನ್ನು ಬರೆಯುತ್ತಿದ್ದಾರೆ. ಈಗಿನ ಯುವ ಜನಾಂಗ ಮೊಬೈಲ್ ಗೀಳಿನಿಂದ ದೂರ ಸರಿದು, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು’.

- ಕರೀಗೌಡ, ಯಲಹಂಕ ಬಿಬಿಎಂಪಿ ವಿಶೇಷ ಆಯುಕ್ತ

‘ಪ್ರತಿವರ್ಷ ನಮ್ಮಲ್ಲಿ 7-8 ಸಾವಿರ ಕೃತಿಗಳು ಬಿಡುಗಡೆಗೊಳ್ಳುತ್ತಿವೆ. ಅದರಲ್ಲಿ ನಾವು ಪುಸ್ತಕದ ಗುಣಮಟ್ಟ ಹುಡುಕುತ್ತಾ ಹೋದರೆ ನಮಗೆ ನಿರಾಶಾದಾಯಕವಾಗುತ್ತದೆ. ನಾವು ಜನಸಂಖ್ಯಾ ಸ್ಫೋಟದ ನಿಯಂತ್ರಣದ ಕುರಿತು ಯೋಚನೆ ಮಾಡುವಂತೆ ಈ ಸಾಹಿತ್ಯ ಕೃತಿಗಳ ನಿಯಂತ್ರಣದ ಬಗ್ಗೆಯೂ ಮುಂದಿನ ದಿನಗಳಲ್ಲಿ ಗಂಭೀರವಾಗಿ ಯೋಚನೆ ಮಾಡಬೇಕು. ಒಬ್ಬ ಬರಹಗಾರ ಯಾಕೆ ಬರೆಯುತ್ತಾನೆ, ಯಾರಿಗೋಸ್ಕರ ಬರೆಯುತ್ತಾನೆ ಎಂಬವುದನ್ನು ಆತ್ಮ ವಿಶ್ಲೇಷಣೆ ಮಾಡಬೇಕಾದ ಸಂದರ್ಭ ಈವತ್ತು ನಮ್ಮ ಮುಂದಿದೆ’.

-ರಘುನಾಥ ಚ.ಹಾ. ಪತ್ರಕರ್ತ

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News