ಬಸ್ ಪ್ರಯಾಣ ದರ ಏರಿಕೆ | ಪುರುಷರಿಗೆ ಹೊರೆಯಾಗುತ್ತಿರುವುದು ಸತ್ಯ : ಸಚಿವ ಶಿವಾನಂದ ಪಾಟೀಲ್
ಬೆಂಗಳೂರು : ‘ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಪುರುಷರಿಗೆ ಹೊರೆಯಾಗಬಹುದು. ಆದರೆ, ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರೆ ಸಂಚರಿಸುತ್ತಿದ್ದಾರೆ’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಮ್ಮದೇ ದಾಟಿಯಲ್ಲಿ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿದ್ದಾರೆ.
ರವಿವಾರ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೆರೆಯ ಆಂಧ್ರ, ತಮಿಳುನಾಡಿನಲ್ಲಿ ಬಸ್ ಪ್ರಯಾಣ ದರ ಕರ್ನಾಟಕ ರಾಜ್ಯಕ್ಕಿಂತ ಹೆಚ್ಚಿದೆ. ಆದರೆ, ನಮ್ಮ ರಾಜ್ಯದಲ್ಲೇ ಕಡಿಮೆ ಇದೆ. ಪ್ರತಿಪಕ್ಷ ಬಿಜೆಪಿಯವರಿಗೆ ಹೋರಾಟ ಮಾಡುವುದನ್ನು ಬಿಟ್ಟರೆ ಬೇರೆ ಏನು ಕೆಲಸ ಹೇಳಿ?’ ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ಯಡಿ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿದ್ದು, ಸಾರಿಗೆ ಸಂಸ್ಥೆ ಲಾಭ-ನಷ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಂಸ್ಥೆ ಉಳಿಸುವ ದೃಷ್ಟಿಯಿಂದ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಶೇ. 15ರಷ್ಟು ಏರಿಕೆಯಿಂದ ಪುರುಷ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಆದರೆ, ಮಹಿಳೆಯರು ಉಚಿತವಾಗಿ ಸಂಚರಿಸುತ್ತಾರೆ ಎಂದು ಶಿವಾನಂದ ಪಾಟೀಲ್ ಹೇಳಿದರು.