ಭೋವಿ ಅಭಿವೃದ್ಧಿ ನಿಗಮ ಹಗರಣ : ಸಾಕ್ಷ್ಯ ಕಳವು ಆರೋಪ
ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಅವ್ಯವಹಾರ ಪ್ರಕರಣ ಸಂಬಂಧ ಪ್ರಮುಖ ಸಾಕ್ಷ್ಯವೊಂದು ಕಳವು ಆಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಸಿಐಡಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಇದರ ನಡುವೆ ಪ್ರಮುಖ ಸಾಕ್ಷಿವೊಂದು ಪರಿಗಣಿಸಿರುವ ಮೊಬೈಲ್ ಕಳವು ಆಗಿರುವ ಸಂಬಂಧ ಇಲ್ಲಿನ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಸಿಪಿ ಶಿವಸ್ವಾಮಿ ಡಿ.27 ರಂದು ಚನ್ನರಾಯಪಟ್ಟಣಕ್ಕೆ ತೆರಳಲು ನೆಲಮಂಗಲದ ಕುಣಿಗಲ್ ಸರ್ಕಲ್‍ನಲ್ಲಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಶಿವಸ್ವಾಮಿ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕದ್ದಿದ್ದಾರೆ. ಈ ಬಗ್ಗೆ ಸಿಪಿ ಶಿವಸ್ವಾಮಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಲೋಕಾಯುಕ್ತ ಮತ್ತು ಸಿಐಡಿ ತನಿಖೆ ನಡೆಸುತ್ತಿವೆ. ತನಿಖೆಗೆ ಹಾಗೂ ನಿಗಮಕ್ಕೆ ಸಂಬಂಧಿಸಿದ ಪ್ರಮುಖ ದಾಖಲಾತಿಗಳು ಮೊಬೈಲ್‍ನಲ್ಲಿ ಇವೆ ಎನ್ನಲಾಗಿದೆ. ಈ ದಾಖಲಾತಿಗಳನ್ನು ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದಾರೆ.