ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿದೆ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಬಿಜೆಪಿ ನಿಜವಾಗಿಯೂ ಸಂವಿಧಾನವನ್ನು ರಕ್ಷಣೆ ಮಾಡಿದೆ. ಮುಂದೆಯೂ ನಾವು ಸಂವಿಧಾನ ರಕ್ಷಣೆ ಮಾಡುತ್ತೇವೆ. ಆದರೆ ಕಾಂಗ್ರೆಸ್ ಅಲ್ಲ. ಅಮಿತ್ ಶಾ ಅವರ ವಿರುದ್ಧ ಹಲವು ಕಡೆ ಹೋರಾಟ ನಡೆಯುತ್ತಿವೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ನವರು ತಿರುಚಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಆರೋಪಿಸಿದ್ದಾರೆ.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ವತಿಯಿಂದ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೆಜ್ಜೆ ಹೆಜ್ಜೆಗೂ ಅಪಮಾನಿಸಿದ್ದೀರಿ, ಮೋಸ ಮಾಡಿದ್ದೀರಿ, ವಂಚನೆ ಮಾಡಿದ್ದೀರಿ ಇಷ್ಟೆಲ್ಲ ಮಾಡಿದ ನೀವು ಇವತ್ತು ಮತ ಬ್ಯಾಂಕ್‍ಗಾಗಿ ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದನ್ನು ಪ್ಯಾಶನ್ ಮಾಡಿಕೊಂಡಿದ್ದೀರಿ, ಅದಕ್ಕಾಗಿ ನೀವು ದೇವರ ಹೆಸರು ಹೇಳಿದ್ದರೆ, ಪುಣ್ಯ ಬರುತ್ತಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ದಲಿತ ಸಂಘಟನೆಗಳು ದಾರಿ ತಪ್ಪಿವೆ. ಅಮಿತ್ ಶಾ ತಪ್ಪು ಹೇಳಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ವಿರೋಧ ಮಾಡಿದರೂ, ಬಿಜೆಪಿ ವಿರೋಧ ಮಾಡಿದರೂ ಅದನ್ನು ನಾನು ವಿರೋಧಿಸುತ್ತೇನೆ. ಆದರೆ ಅಮಿತ್ ಶಾ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್‍ನವರು ಅಪಮಾನ ಮಾಡಿದ್ದನ್ನು ನಿಂದಿಸಿದರು. ಅದು ಕಾಂಗ್ರೆಸ್‍ಗೆ ಅಪಮಾನವಾಯಿತು. ಕಾಂಗ್ರೆಸ್‍ಗೆ ಆದ ಅಪಮಾನ ದಲಿತರಿಗೆ ಆದಂತೆ ಅಲ್ಲ ಎಂದು ಹೇಳಿದರು.
ಒಂದು ಸಾರಿಯಾದರೂ ಬಿಜೆಪಿ ಸಂವಿಧಾನ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದನ್ನು ರುಜುವಾತು ಮಾಡಿದರೆ, ಅದೇ ದಿನ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್‍ನ ರಕ್ತದಲ್ಲೇ ಸುಳ್ಳು ಹೇಳುವುದು ಬಂದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ನಿರ್ಧಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸುವುದು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಕೇವಲ ಮತ ಪಡೆಯುವ ಸಲುವಾಗಿ ಸುಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದು ಜನರನ್ನು ವಂಚಿಸುತ್ತಿರುವ ಸರಕಾರದ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಅಧಿಕಾರದ ಮದ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ನೀಡಿ, ಅದರ ವೆಚ್ಚವನ್ನು ಭರಿಸಲು ಬೆಲೆ ಏರಿಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ರಾಜ್ಯ ಸರಕಾರದ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎನ್.ಮಹೇಶ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ರಾಮಕ್ಕ, ಹರತಾಳು ಹಾಲಪ್ಪ, ವೈ.ಸಂಪಂಗಿ, ಬಿಜೆಪಿ ಮುಖಂಡರಾದ ಆರ್.ರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.