ಬೆಂಗಳೂರು | ಬಸ್ ಪ್ರಯಾಣ ದರ ಏರಿಕೆಗೆ ಭಾರಿ ವಿರೋಧ, ಹಲವೆಡೆ ಪ್ರತಿಭಟನೆ

Update: 2025-01-05 16:26 GMT

ಬೆಂಗಳೂರು : ರಾಜ್ಯ ಸರಕಾರವು ಸಾರಿಗೆ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಿಸಿರುವುದನ್ನು ವಿರೋಧಿಸಿ, ರವಿವಾರ ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್), ಆಮ್ ಆದ್ಮಿ, ಸೋಷಿಯಾಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ)ವತಿಯಿಂದ ಪ್ರತ್ಯೇಕ ಪ್ರತಿಭಟನೆ ನಡೆಸಿ, ಬಸ್ ಪ್ರಯಾಣ ದರವನ್ನು ಕೂಡಲೇ ಇಳಿಕೆ ಮಾಡಬೇಕೆಂದು ಒತ್ತಾಯಿಸಲಾಯಿತು.

ರವಿವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ್ದ ಆಮ್ ಆದ್ಮಿ ಕಾರ್ಯಕರ್ತರು ಎತ್ತಿನ ಬಂಡಿ ಎಳೆಯುವ ಮೂಲಕ ಪ್ರತಿಭಟನೆ ನಡೆಸಿ, ಕಿಡಿಕಾರಿದರು. ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ಕಾಂಗ್ರೆಸ್ ಸರಕಾರವು ಆಮ್ ಆದ್ಮಿ ಪಕ್ಷದ ಗ್ಯಾರಂಟಿಗಳನ್ನು ನಕಲು ಮಾಡಿ ಅಧಿಕಾರ ಪಡೆದಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಈಗಾಗಲೇ ವಿದ್ಯುತ್ ದರ, ಹಾಲಿನ ದರ ಏರಿಸಲಾಗಿದೆ. ಈಗ ಬಸ್ ದರ ಏರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಏರಿಕೆಯ ಹೊಸ ದರವನ್ನು ಧಿಕ್ಕರಿಸಿ ಹಳೆ ದರದಲ್ಲಿ ಪ್ರಯಾಣ ಮಾಡುವ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ಕೆಆರ್‍ಎಸ್ ಉಪಾಧ್ಯಕ್ಷ ರಘು ಜಾಣಗೆರೆ, ಹಣದುಬ್ಬರ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಸಂಕಷ್ಟದ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ ದರವನ್ನು ಏರಿಸಿರುವ ರಾಜ್ಯ ಸರಕಾರದ ಜನ ವಿರೋಧಿ ನಿರ್ಧಾರ ಖಂಡನೀಯ. ಸಾರ್ವಜನಿಕ ಸಾರಿಗೆ ಬಸ್‍ಗಳನ್ನು ಬಳಸದ ಕೋಟ್ಯಾಂತರ ರೂ.ಗಳ ವಿದೇಶಿ ಕಾರ್‍ಗಳಲ್ಲಿ ಪ್ರಯಾಣಿಸುವ ಜನ ನಾಯಕರನ್ನು ಆಯ್ಕೆ ಮಾಡುತ್ತಿರುವ ಪರಿಣಾಮವಾಗಿ ಇಂತಹ ಅನಾನುಕೂಲಗಳನ್ನು ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಆರ್‍ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್, ರಘು ನಂದನ, ರಾಜ್ಯ ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲಾ, ನಿರ್ಮಲಾ, ನಾಗೇಂದ್ರ, ಅಮಿತ್, ರಾಮ ರೆಡ್ಡಿ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಬಂಧನ-ಬಿಡುಗಡೆ: ಹೊಸ ದರವನ್ನು ಧಿಕ್ಕರಿಸಿ ಹಳೆ ದರದಲ್ಲಿ ಪ್ರಯಾಣ ಮಾಡುವ ಮೂಲಕ ಪ್ರತಿಭಟನೆಯ ವೇಳೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಕೆಆರ್‍ಎಸ್ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಚಾಮರಾಜಪೇಟೆಯಲ್ಲಿ ಬಿಡುಗಡೆ ಮಾಡಿದರು. ಇದೇ ವೇಳೆ ನೂರಾರು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು.

ಬಡ ಜನರಿಗೆ ಮತ್ತೊಂದು ಬರೆ: ಬಡ ಜನತೆ ಬಳಸುವ ಬಸ್ ಸೌಲಭ್ಯದ ದರವನ್ನು ಹೆಚ್ಚಿಸಿರುವುದು ಬಡ ಜನತೆಯ ಬದುಕಿನ ಮೇಲೆ ಮತ್ತೊಂದು ಬರೆ ಎಳೆದಂತಿದೆ ಎಂದು ಎಸ್‍ಯುಸಿಐ ಉತ್ತರ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಜ್ಞಾನಮೂರ್ತಿ ತಿಳಿಸಿದ್ದಾರೆ.

ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ, ರವಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,

ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಅಗತ್ಯ ಕಾರ್ಯಗಳಿಗಾಗಿ ಬರುವ ಬಡ ಜನರಿಗೆ ಹೊಸ ವರ್ಷದ ಉಡುಗೊರೆಯಾಗಿ ಸರಕಾರವು ಬಸ್ ಪ್ರಯಾಣ ದರ ಏರಿಕೆಯ ಪೆಟ್ಟು ನೀಡಿದೆ. ಸಾರಿಗೆಯಂತಹ ಮೂಲ ಸೌಲಭ್ಯಗಳನ್ನು ದುಬಾರಿಯಾಗಿಸುವುದು ಅಪ್ರಜಾತಾಂತ್ರಿಕ. ಹಿಂದಿನ ಎಲ್ಲ ಸರಕಾರಗಳೂ ಸೇರಿದಂತೆ ಕಾಂಗ್ರೆಸ್ ಸರಕಾರವೂ ಜನ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಿಡಿ ಕಾರಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News