ಅಹಿಂದ ವರ್ಗಕ್ಕೆ ಅನ್ಯಾಯವೆಸಗುವುದು ದುರಂತ: ವಿಜಯೇಂದ್ರ
ಬೆಂಗಳೂರು : ‘ದಲಿತರಿಗೆ, ಹಿಂದುಳಿದ ವರ್ಗಕ್ಕೆ ಅನ್ಯಾಯವೆಸಗುವುದಕ್ಕೆ ಕಾಂಗ್ರೆಸ್ ಸರಕಾರ ಸದಾ ‘ಸಿದ್ಧ’. ವಾಲ್ಮೀಕಿ ನಿಗಮದಲ್ಲಿ ಅಕ್ರಮವೆಸಗಿದ್ದ ಕಾಂಗ್ರೆಸ್ ಈ ಹಿಂದಿನ ಅವಧಿಯಲ್ಲಿ ಅಂಬೇಡ್ಕರ್ ನಿಗಮದಲ್ಲೂ ಅಧಿಕಾರಿಗಳ ಮೂಲಕ ಲೂಟಿ ಮಾಡಿದ್ದು ವರದಿಯಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಲ್ಲೇಖಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಭೂ ಒಡೆತನ ಯೋಜನೆಗೆ ಸಂಬಂಧಿಸಿದ 2012ರಿಂದ 2018ರ ವರೆಗೆ 23 ಕಡತಗಳು ಕಚೇರಿಯಲ್ಲಿ ಲಭ್ಯ ಇಲ್ಲದಿರುವುದು ಪತ್ತೆಯಾಗಿದೆ. ನಕಲಿ ದಾಖಲಾತಿಗಳನ್ನು ಸೃಷ್ಟಿಸಲಾಗಿದೆ. ಇಲ್ಲದಿರುವ ವ್ಯಕ್ತಿಗಳನ್ನು ಮತ್ತು ಎಸ್‍ಸಿ ಮಹಿಳೆಯರು ತಮ್ಮ ಸ್ವಂತ ಖರ್ಚಿನಿಂದ ಖರೀದಿಸಿದ ಜಮೀನಿಗೆ ಭೂ ಒಡೆತನ ಯೋಜನೆಯಲ್ಲಿ ಖರೀದಿಸಿದಂತೆ ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
‘ಸರಕಾರದ ಕೃಪಾಕಟಾಕ್ಷವಿಲ್ಲದೇ ದೊಡ್ಡ ಮಟ್ಟದ ಅವ್ಯವಹಾರ ನಡೆಸಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದಲ್ಲಿ ಚುನಾವಣೆ ಖರ್ಚಿಗಾಗಿ ಅಧಿಕಾರಿಗಳ ಮೂಲಕ ಹಣ ವರ್ಗಾವಣೆ ಮಾಡಿದಂತೆ, ಅಂಬೇಡ್ಕರ್ ನಿಗಮದಲ್ಲೂ ಅಕ್ರಮವೆಸಗಿದೆ. ಅಹಿಂದ ಹೆಸರಿನಲ್ಲಿ ಆಡಳಿತ ನಡೆಸುವ ಸಿದ್ದರಾಮಯ್ಯ ಅದೇ ಅಹಿಂದ ವರ್ಗಕ್ಕೆ ಅನ್ಯಾಯವೆಸಗುವುದು ದುರಂತ’ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಕಾಂಗ್ರೆಸ್ ಗ್ಯಾಂಗ್ ಅನ್ನು ಸಂಪರ್ಕಿಸಿ :
‘ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಈ ಕೆಳಗಿನ ಕಾಂಗ್ರೆಸ್ ಪಕ್ಷದ ಗ್ಯಾಂಗ್ ಅನ್ನು ಸಂಪರ್ಕಿಸಿ. ಧಮ್ಕಿಗೆ-ಡಿ.ಕೆ.ಶಿವಕುಮಾರ್, ಕೊಲೆಗೆ-ವಿನಯ್ ಕುಲಕರ್ಣಿ, ಆತ್ಮಹತ್ಯೆಗೆ ಸುಪಾರಿ-ಪ್ರ್ರಿಯಾಂಕ್ ಖರ್ಗೆ, ಶಾಸಕರ ಕೊಲೆಗೆ-ಲಕ್ಷ್ಮಿ ಹೆಬ್ಬಾಳ್ಕರ್, ರೈತರು, ಅಧಿಕಾರಿಗಳ ಹತ್ಯೆಗೆ-ಸಿದ್ದರಾಮಯ್ಯ, ಆಸ್ಪತ್ರೆಗಳಲ್ಲಿ ಕೊಲೆಗೆ-ದಿನೇಶ್ ಗುಂಡೂರಾವ್, ದಲಿತರ ಮೇಲಿನ ಹಲ್ಲೆಗೆ-ಹಿರಿಯೂರು ಡಿ.ಸುಧಾಕರ್, ಪೊಲೀಸರ ಮೇಲೆ ಹಲ್ಲೆಗೆ-ವಿಜಯಾನಂದ ಕಾಶಪ್ಪನವರ್, ಅವಾಚ್ಯ ಶಬ್ಧ ಬಳಸಿ ಬೈಯಲು-ಅರಸೀಕೆರೆ ಶಿವಲಿಂಗೇಗೌಡ..ಅವಶ್ಯಕತೆ ಇರುವವರು ಸಂಪರ್ಕಿಸಬೇಕಾದ ವಿಳಾಸ ಕ್ವೀನ್ಸ್‍ರಸ್ತೆ ಕೆಪಿಸಿಸಿ ಕಚೇರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.