ಬೆಂಗಳೂರು | ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ವಂಚನೆ : ಇಬ್ಬರ ಬಂಧನ
ಬೆಂಗಳೂರು : ಸರಕಾದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಹನುಮಂತಪ್ಪ ಹಾಗೂ ವಿಜಯಪುರದ ಬಿರಾದಾರ್ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿ ಗೋವಿಂದರಾಜು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ.
ಆರೋಪಿ ಗೋವಿಂದರಾಜು ಮೆಜೆಸ್ಟಿಕ್‍ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ, ಅಭ್ಯರ್ಥಿಗಳನ್ನು ಸಂಪರ್ಕಿಸಿ, 'ನನಗೆ ಪರೀಕ್ಷೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳ ಪರಿಚಯವಿದೆ. ಪಾಸ್ ಮಾಡಿಸಿ ಹುದ್ದೆ ಕೊಡಿಸುವೆ' ಎಂದು ನಂಬಿಸುತ್ತಿದ್ದ. ಆನಂತರ, ಪಿಡಿಒ ಹುದ್ದೆಗೆ 25 ಲಕ್ಷ ಹಾಗೂ ಕೆಎಎಸ್ ಪೂರ್ವ ಸಿದ್ಧತಾ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.