ಆರೆಸ್ಸೆಸ್, ಬಿಜೆಪಿ ಅಣತಿಯಂತೆ ನಡೆಯುತ್ತಿರುವ ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತೊರೆಯಲಿ: ಮಾದಿಗ ಸಮುದಾಯದ ಹೋರಾಟಗಾರರ ಆಗ್ರಹ
ಬೆಂಗಳೂರು : ಬಿಜೆಪಿ, ಆರೆಸ್ಸೆಸ್ ಅಣತಿಯಂತೆ ಮಾದಿಗ ಸಮುದಾಯಕ್ಕೆ ಅಪಚಾರ ಎಸಗುತ್ತಿರುವ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ತಕ್ಷಣವೇ ಪೀಠವನ್ನು ತೊರೆಯಲಿ ಎಂದು ಮಾದಿಗ ಸಮುದಾಯದ ಹೋರಾಟಗಾರರು, ಬರಹಗಾರರು ಬಹಿರಂಗ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಚಿಂತಕರು ಮತ್ತು ಹೋರಾಟಗಾರರಾದ ಪ್ರೊ.ಸಿ.ಕೆ.ಮಹೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ಬಿ.ಆರ್.ಭಾಸ್ಕರ್ ಪ್ರಸಾದ್, ವಕೀಲರಾದ ಪ್ರೊ.ಹರಿರಾಮ್, ಹನುಮೇಶ್ ಗುಂಡೂರು, ಬರಹಗಾರರಾದ ರವಿಕುಮಾರ್ ಟೆಲೆಕ್ಸ್, ಯತಿರಾಜ್ ಅವರು ನೀಡಿರುವ ಪತ್ರದಲ್ಲಿ ಸ್ವಾಮೀಜಿಯವರ ನಡೆಯನ್ನು ಖಂಡಿಸಲಾಗಿದೆ.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಿರುವ ಸಂಘಪರಿವಾರದ ಜೊತೆ ಮಾದಿಗ ಸಮುದಾಯ ಇದೆ ಎಂಬಂತೆ ಬಿಂಬಿಸುತ್ತಿರುವುದನ್ನು ನಾವು ಸಹಿಸುವುದಿಲ್ಲ. ಸ್ವಾಮೀಜಿಯವರು ಪೀಠವನ್ನು ತೊರೆದು ಬಿಜೆಪಿ ಮತ್ತು ಆರೆಸ್ಸೆಸ್ ಸೇರಿಕೊಳ್ಳಲಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಗರ ಅಣತಿಯಂತೆ ಕುಣಿಯುವ ಸ್ವಾಮೀಜಿ, ಮಾದಿಗರನ್ನು ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಮುಂದಾಗಿದ್ದಾರೆ. ಸಮುದಾಯವನ್ನು ದಿಕ್ಕು ತಪ್ಪಿಸುವ ಸ್ವಾಮೀಜಿಯ ನಡೆಯು ಖಂಡನೀಯವಾಗಿದ್ದು, ಈ ಪ್ರವೃತ್ತಿ ಮುಂದುವರಿದರೆ ಮಾದಿಗ ಸಮುದಾಯವು ಸುಮ್ಮನಿರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪತ್ರದಲ್ಲೇನಿದೆ? :
ಲೋಕಸಭಾ ಚುನಾವಣೆಯಲ್ಲಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸುವ ಮುಕ್ತ ಅಜೆಂಡಾ ಹೊಂದಿದ್ದ ಬಿಜೆಪಿ, ಸಂಘಪರಿವಾರವನ್ನು ಈ ದೇಶದ ಸಮಸ್ತ ದಲಿತ ಸಮುದಾಯ ಬಲವಾಗಿ ವಿರೋಧಿಸಿದ ಕಾರಣ, ಬಿಜೆಪಿ ಬಹುಮತ ಕಳೆದುಕೊಂಡಿತು. ಆನಂತರ ಗಾಬರಿಗೊಂಡಿರುವ ಸಂಘಪರಿವಾರವು ಹಿಂಬಾಗಿನಿಂದ ಬಂದು ದಲಿತ ಸಮುದಾಯವನ್ನು ಒಡೆದು ಆಳುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ 'ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್' ಎಂಬ ವೇದಿಕೆ ರೂಪಿಸಿಕೊಂಡು 'ಸಂವಿಧಾನ ಸನ್ಮಾನ' ಎಂಬ ಹೆಸರಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಅರ್ಧಸತ್ಯಗಳನ್ನು, ಹಸಿಹಸಿ ಸುಳ್ಳುಗಳ ಕಥೆ ಕಟ್ಟಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆರೆಸ್ಸೆಸ್ ರೂಪಿಸುತ್ತಿದೆ. ಇದಕ್ಕೆ ಮಾದಿಗ ಸಮುದಾಯದ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಟ್ಟು, ಮಾದಿಗ ಸಮುದಾಯ ಇಂತಹ ಪಿತೂರಿ ಕೃತ್ಯಗಳ ಭಾಗವಾಗಿದೆ ಎಂಬಂತೆ ಚಿತ್ರಿಸಲಾಗುತ್ತಿದೆ.
ಮೊದನಿಂದಲೂ ಬುದ್ಧ, ಬಸವ ಮಾರ್ಗಕ್ಕೆ, ಬಾಬಾ ಸಾಹೇಬರ ಚಿಂತನೆಗಳಿಗೆ ವಿರುದ್ಧವಾಗಿಯೂ, ಸಂಘಪರಿವಾರದ ಬಾಲಂಗೋಚಿಯಾಗಿಯೂ ನಡೆದುಕೊಂಡಿರುವ ಸ್ವಾಮೀಜಿ, ಸಮುದಾಯದ ಪ್ರತಿನಿಧಿಯೂ ಅಲ್ಲ, ಸಮುದಾಯದ ನೋವು- ನಲಿವು, ಒಲವು- ನಿಲುವುಗಳೂ ಅವರಿಗೆ ತಿಳಿದಿಲ್ಲ. ಮಾದಾರ ಚೆನ್ನಯ್ಯನವರ ಪೀಠದಲ್ಲಿ ಕೂತ ಮಾತ್ರಕ್ಕೆ ಅವರು ಸಮುದಾಯದ ಸಾಕ್ಷಿಪ್ರಜ್ಞೆಯಾಗುವುದಿಲ್ಲ. ಬಿಜೆಪಿ, ಸಂಘಪರಿವಾರ ಹೇಳಿದಂತೆ ಕುಣಿಯುತ್ತಿರುವ ಸ್ವಾಮೀಜಿಯವರು ಕಾವಿ ಕಳಚಿ, ಬಿಜೆಪಿಯನ್ನೋ, ಆರೆಸ್ಸೆಸ್ ಸಂಸ್ಥೆಯನ್ನೋ ಸೇರಿಕೊಂಡು ಅವರು ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದರೆ ನಮ್ಮದೇನೂ ತಕರಾರು ಇಲ್ಲ. ಸ್ವಾಮೀಜಿಯವರು ಮೊದಲಿನಿಂದಲೂ ಆರೆಸ್ಸೆಸ್ ಮತ್ತು ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅವರು ಪೀಠ ತೊರೆದು ತಾವು ಬಿಜೆಪಿಯ ಬಾಲಂಗೋಚಿ ಎಂಬುದನ್ನು ಸಾಬೀತು ಮಾಡಬೇಕು. ಆರೆಸ್ಸೆಸ್ ಸರಸಂಘಚಾಲಕ ಹುದ್ದೆಯನ್ನೋ, ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನೋ ಕೊಟ್ಟರೆ ನಿಭಾಯಿಸಲು ಸ್ವಾಮೀಜಿ ಯೋಗ್ಯವಾಗಿದ್ದಾರೆ. ಒಟ್ಟಾರೆ ಸ್ವಾಮೀಜಿಯವರು ಪೀಠ ತೊರೆಯುವವರೆಗೂ ಸಮುದಾಯ ಹೋರಾಟ ನಡೆಸಬೇಕಾಗುತ್ತದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಕೆಲಸವನ್ನು ಸ್ವಾಮೀಜಿ ಕೈಗೊಂಡಿದ್ದರು. 'ಸಂವಿಧಾನದಲ್ಲಿ ಮನುಸ್ಮೃತಿಯನ್ನು ಸೇರಿಸಿಲ್ಲ', 'ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ' ಎಂದಿದ್ದ ಆರೆಸ್ಸೆಸ್ ಕೂಟವು ಈ ಹಿಂದೆ 'ಮಾದಿಗ ಮುನ್ನಡೆ' ಎಂಬ ಕಾರ್ಯಕ್ರಮ ನಡೆಸಿತ್ತು. ಆ ಮೂಲಕ 'ಮನುವಾದ ಮುನ್ನಡೆ' ಮಾಡುವ ಪಿತೂರಿ ನಡೆದಿತ್ತು. ಅದಕ್ಕೂ ಈ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಡಲಾಗಿತ್ತು. ಸಮುದಾಯ ಎಚ್ಚೆತ್ತುಕೊಂಡು ಪ್ರಶ್ನೆ ಮಾಡಿದಾಗ ತಣ್ಣಗಾಗಿದ್ದರು. ಮಾದಿಗರನ್ನು ಒಂದು ಪಕ್ಷದ, ಮತೀಯವಾದಿ ಸಿದ್ಧಾಂತ ಹೊಂದಿರುವ ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರು ಪೀಠವನ್ನು ತೊರೆದು ತಾವು ಬಿಜೆಪಿ ಹೇಳಿದಂತೆ ಕುಣಿಯುವ ರಾಜಕಾರಣಿ ಎಂದು ಸಾಬೀತು ಮಾಡಲಿ. ಸಮುದಾಯವನ್ನು ದಿಕ್ಕು ತಪ್ಪಿಸುವ ಈ ಪ್ರವೃತ್ತಿ ಮುಂದುವರಿದರೆ ಸಮುದಾಯ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.