ಬೆಂಗಳೂರಿನಲ್ಲಿ ಎಚ್.ಎಂ.ಪಿ.ವಿ. ಸೋಂಕು ಪತ್ತೆ ಹಿನ್ನೆಲೆ: ಇಂದು ಮಧ್ಯಾಹ್ನ ಆರೋಗ್ಯ ಸಚಿವರಿಂದ ತುರ್ತು ಸಭೆ
ಬೆಂಗಳೂರು, ಜ.6: ಚೀನಾದಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್ಎಂಪಿವಿ) ಹಾವಳಿ ಹೆಚ್ಚಾಗಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಎಚ್ಎಂಪಿವಿ ವೈರಸ್ ತಗುಲಿರುವುದಾಗಿ ಖಾಸಗಿ ಆಸ್ಪತ್ರೆಯ ವರದಿ ತಿಳಿಸಿದೆ. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮಗಳ ಕುರಿತಂತೆ ಚರ್ಚಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು(ಜ.6) 12:30 ಕ್ಕೆ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಮಧ್ಯಾಹ್ನ 12.30ಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವರು ತುರ್ತು ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎಚ್ಎಂಪಿವಿ ವೈರಸ್ ಸೋಂಕು ದೃಢಪಟ್ಟಿರುವ ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಎಚ್.ಎಂ.ಪಿ.ವಿ. ವೈರಸ್ ಲಕ್ಷಣ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಎಚ್ಎಂಪಿವಿ ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮಗುವಿನ ಟ್ರಾವೆಲ್ ಹಿಸ್ಟರಿ ಸಂಗ್ರಹಕ್ಕೆ ಮುಂದಾಗಿದೆ.
ಈ ನಡುವೆ ಹೆಚ್ಚಿನ ತಪಾಸಣೆಗಾಗಿ ಮಗುವಿನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದ್ದು, ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ತುರ್ತು ಸಭೆ: ವೈರಸ್ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತಂತೆ ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು(ಜ.6) 12.30 ಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲಿದ್ದಾರೆ.