ಮಾನಸಿಕ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಮ್ಹಾನ್ಸ್ ಕಾರ್ಯ ಶ್ಲಾಘನೀಯ : ದ್ರೌಪದಿ ಮುರ್ಮು
ಬೆಂಗಳೂರು : ಮಾನಸಿಕ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಮ್ಹಾನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಸಂಶೋಧನೆ ಮತ್ತು ವಸ್ತುನಿಷ್ಠ ಪಠ್ಯಕ್ರಮಗಳು ಸಂಸ್ಥೆಯನ್ನು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಿಮ್ಹಾನ್ಸ್ ಆಸ್ಪತ್ರೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಹಾನ್ಸ್ ಸಂಸ್ಥೆಯು ಸುವರ್ಣ ಮೊಹೋತ್ಸವವನ್ನು ಆಚರಿಸುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. 19ನೆಯ ಶತಮಾನದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ನವ ಭಾರತದಲ್ಲಿ ಉಂಟಾಗುತ್ತಿರುವ ಮಾನಸಿಕ ಖಾಯಿಲೆಯ ಸಮಸ್ಯೆಯನ್ನು ಎದುರಿಸಿ ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಆರೋಗ್ಯ ಸವಿವ ಜೆ.ಪಿ. ನಡ್ಡಾ ಮಾತನಾಡಿ, ಕೇವಲ ಮಾನಸಿಕ ರೋಗದ ಆಸ್ಪತ್ರೆಯಾಗಿದ್ದ ಸಂಸ್ಥೆಯು, ಇಂದು ದೇಶದ ಮುಂಚೂಣಿ ಮಾನಸಿಕ ಅರೋಗ್ಯ ಸಂಸ್ಥೆಯಾಗಿ ಬೆಳೆದಿರುವುದು ಇಲ್ಲಿನ ಸಿಬ್ಬಂದಿ, ಅಧಿಕಾರಿಗಳು ಮತ್ತು ವೈದ್ಯರ ಶ್ರಮದಿಂದಾಗಿದೆ. ಕೇವಲ ವೈದ್ಯಕೀಯ ಕ್ಷೇತ್ರವಲ್ಲದೆ ದೇಶದ ಉನ್ನತ ಸಂಸ್ಥೆಯಾಗಿ ಬೆಳೆದಿರುವುದರ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಸುಮಾರು ದೇಶದ ವಿವಿಧಗಳಿಂದ 7 ಲಕ್ಷ ಜನ ಮಾನಸಿಕ ಮತ್ತು ನರಕ್ಕೆ ಸಂಬಂಧಿಸಿದ ಖಾಯಿಲೆಗಳ ಚಿಕಿತ್ಸೆಗೆ ಆಗಮಿಸತ್ತಾರೆ. ಇದು ಸಂಸ್ಥೆಯ ಉನ್ನತ ಮಟ್ಟದ ಚಿಕಿತ್ಸಾ ಪದ್ದತಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಿಮ್ಹಾನ್ಸ್ ಐದು ದಶಕಗಳ ಅವಧಿಯಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡುತ್ತಾ ಬಂದಿದ್ದು, ದೇಶದ ಪ್ರಮುಖ ಸಂಸ್ಥೆಯಾಗಿ ಛಾಪು ಮೂಡಿಸಿದೆ. ಮೈಸೂರು ಸರಕಾರದ ಮಾನಸಿಕ ಆಸ್ಪತ್ರೆ ಮತ್ತು ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಒಗ್ಗೂಡಿಸುವ ಮೂಲಕ ಪ್ರಾರಂಭವಾದ ನಿಮ್ಹಾನ್ಸ್, ಮಾನಸಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಾದ ಭಾರತದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಯದುವೀರ್ ಒಡೆಯರ್, ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕಿ ಪ್ರತಿಮಾ ಮೂರ್ತಿ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.