ಹವ್ಯಕರು ಬೇಗ ಮದುವೆಯಾಗಿ, ಕನಿಷ್ಠ ಮೂರು ಮಕ್ಕಳನ್ನು ಪಡೆಯಿರಿ : ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ

Update: 2024-12-30 10:04 GMT

ಬೆಂಗಳೂರು : "ಹವ್ಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಸಮುದಾಯದ ಯುವಕ–ಯುವತಿಯರಿಗೆ 18–21 ವರ್ಷಕ್ಕೆ ವಿವಾಹ ಮಾಡಿಸಬೇಕು" ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಹಸ್ರಚಂದ್ರ ಸಭೆಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯ ಎದುರಿಸುತ್ತಿದೆ. ಯುವಕ–ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕೆ ವಿವಾಹ ಮಾಡಿಸುವುದೇ ಪರಿಹಾರೋಪಾಯ. ಹವ್ಯಕರು ತಮ್ಮ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು ಎಂದು ಹೇಳಿದ್ದಾರೆ.

ತಮಿಳು ಬ್ರಾಹ್ಮಣರಲ್ಲಿ ಕನಿಷ್ಠ ವಯೋಮಿತಿಗೆ ವಿವಾಹ ಮಾಡಲಾಗುತ್ತಿದೆ. ಸೂಕ್ತ ವಯಸ್ಸಿಗೆ ಶಾಸ್ತ್ರೀಯವಾಗಿ ವಿವಾಹವಾದರೆ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಮೂರಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದವರು ಆ ಮಕ್ಕಳನ್ನು ಮಠಕ್ಕೆ ಒಪ್ಪಿಸಿದಲ್ಲಿ ಅವರನ್ನು ನಾವು ನೋಡಿಕೊಳ್ಳುತ್ತೇವೆ. ವಿವಾಹದ ಬಳಿಕವೂ ಶಿಕ್ಷಣ ಮುಂದುವರಿಸಿ, ಉದ್ಯೋಗ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಹವ್ಯಕರು ಯಾವಾಗಲೂ ಬ್ರಾಹ್ಮಣರಾಗಿಯೇ ಉಳಿಯಬೇಕು. ವಿವಾಹ ಮೊದಲಾದ ಶುಭಕಾರ್ಯದಲ್ಲಿ ಆಡಂಬರಕ್ಕೆ ಆದ್ಯತೆ ನೀಡದೆ, ವಿಧಿವಿಧಾನಕ್ಕೆ ಆದ್ಯತೆ ನೀಡಬೇಕು. ಹವ್ಯಕ ಸಮುದಾಯ ವೃದ್ಧಿಗೆ ಮೂರು ಮಕ್ಕಳನ್ನಾದರು ಹೊಂದಬೇಕು. ಒಬ್ಬರು ವೇದ–ಸಂಸ್ಕೃತಿ ರಕ್ಷಣೆಗಾದರೆ, ಇನ್ನೊಬ್ಬರು ದೇಶ ರಕ್ಷಣೆಗೆ, ಮತ್ತೊಬ್ಬರನ್ನು ಕೃಷಿ ಮತ್ತು ಕುಟುಂಬ ರಕ್ಷಣೆಗೆ ಬಿಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಮಕೃಷ್ಣ ಆಶ್ರಮದ ಚಂದ್ರೇಶಾನಂದಜೀ ಮಹಾರಾಜ್, ಶಾಸಕ ಅಶೋಕ್ ಕುಮಾರ್ ರೈ, ಸಮ್ಮೇಳನದ ಗೌರವಾಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News