ಬೆಂಗಳೂರು | ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ
ಬೆಂಗಳೂರು: ಇಲ್ಲಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್ ಮಳಿಗೆವೊಂದರಲ್ಲಿ ಬುಧವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕೋಟ್ಯಂತರ ರೂ. ಮೌಲ್ಯದ 52ಕ್ಕೂ ಹೆಚ್ಚು ಬೈಕ್‍ಗಳು ಸುಟ್ಟು ಭಸ್ಮವಾಗಿವೆ.
ಬಿ.ನಾರಾಯಣಪುರದಲ್ಲಿ ಬೈಕ್ ಮಳಿಗೆಯಲ್ಲಿ ಬುಧವಾರ ಎಂದಿನಂತೆ ಸಿಬ್ಬಂದಿ ಕೆಲಸ ಮುಗಿಸಿ ರಾತ್ರಿ 7 ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಆದರೆ, ರಾತ್ರಿ 8.45ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಳಿಗೆಯಲ್ಲಿ ಇದ್ದಂತಹ 50ಕ್ಕೂ ಹೆಚ್ಚು ಬೈಕ್‍ಗಳು ಬೆಂಕಿಗಾಹುತಿಯಾಗಿವೆ.
ಕೆಲ ಸಮಯದ ಬಳಿಕ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹೊರಗೆ ಕಾಣಿಸಿಕೊಂಡಾಗ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.ಅಷ್ಟರಲ್ಲಾಗಲೇ ಶೋ ರೂಂ ಹಿಂಬದಿಯಲ್ಲಿರುವ ಸರ್ವಿಸ್ ಸೆಂಟರ್‌ಗೂ ಬೆಂಕಿ ಆವರಿಸಿಕೊಂಡು 52 ಬೈಕ್‍ಗಳು ಸೇರಿದಂತೆ ಪೀಠೋಪಕರಣಗಳು ಭಸ್ಮವಾಗಿವೆ.
ವಿದ್ಯುತ್ ಶಾರ್ಟ್ ಸಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.