ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ಅಧಿಕಾರಿ ವರ್ಗದ ಸಹಕಾರ ಅಗತ್ಯ : ಸಿದ್ದರಾಮಯ್ಯ

Update: 2025-01-01 14:57 GMT

ಬೆಂಗಳೂರು : ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆದು ಹಾಕಲು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಹಕಾರ ಹೆಚ್ಚುಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು, ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಎಂದರು.

ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಡಳಿತಾಂಗದಲ್ಲಿ ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಂವಿಧಾನ ಜಾರಿ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಆಡಿದ ಮಾತುಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎಂದರು.

ಭಾರತದ ಆರ್ಥಿಕತೆ ಕುಸಿತ ಕಂಡಿದ್ದಾಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದರು. ದೇಶದ ಆರ್ಥಿಕ ಬೆಳವಣಿಗೆ ಆಗಿ ಇದರ ಲಾಭ ದೇಶದ ಜನರಿಗೆ ಲಭಿಸುವಂತೆ ಮಾಡಿದರು. ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಕಡ್ಡಾಯ ಮಾಡಿದರು. ಆ ಮೂಲಕ ಸಮಾನತೆಯೆಡೆಗೆ ದೇಶವನ್ನು ಮುನ್ನಡೆಸಿದರು ಎಂದು ಸಿದ್ದರಾಮಯ್ಯ ವಿವರಿಸಿದರು.

ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಕಾಸು ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಲ್ಲಿಯವರೆಗೂ 35 ಸಾವಿರ ಕೋಟಿ ರೂ.ಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಈಗಲಾದರೂ ನಂಜುಂಡಪ್ಪ ಅವರ ವರದಿಯಲ್ಲಿನ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿದೆಯಾ ಎನ್ನುವುದನ್ನು ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿ ರಚಿಸಲಾಗಿದೆ. ಉತ್ತರ ಕರ್ನಾಟಕದ ಅಸಮಾನತೆ ಕಡಿಮೆ ಆಗಿಲ್ಲ ಎನ್ನುವ ಬಗ್ಗೆಯೂ ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸಿದ್ದೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಝಮೀರ್ ಅಹ್ಮದ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅಹ್ಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವ ಜನತೆ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸಿ : ಸಿಎಂ

ಯುವ ಜನತೆ ನಮ್ಮ ಸಮಾಜದ ಆಸ್ತಿ. ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು ಐಪಿಎಸ್ ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್ ಹಾವಳಿ, ಅಪರಾಧಿಕ ಜಗತ್ತಿನ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ ಎಂದ ಸಿದ್ದರಾಮಯ್ಯ, ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಅದ್ಭುತ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ ಎಂದರು.

ಇಲಾಖೆಗಳಲ್ಲಿ ಹಣ ಹೆಚ್ಚು ಸೋರಿಕೆಯಾಗದಂತೆ ಜವಾಬ್ದಾರಿ ವಹಿಸಿ :

ಅಭಿವೃದ್ಧಿಗೆ ಹಣ ಇಲ್ಲ ಎಂದು ವಿಪಕ್ಷದವರು ಸುಳ್ಳನ್ನು ಪದೇ ಪದೇ ಹರಡಿಸುತ್ತಿದ್ದಾರೆ. ಇದು ಸುಳ್ಳು ಎನ್ನುವುದು ಅಧಿಕಾರಿ ವರ್ಗಕ್ಕೂ ಗೊತ್ತಿದೆ. ಹಿಂದಿನ ಸರಕಾರ ಬಜೆಟ್ ಒಪ್ಪಿಗೆ ಪಡೆಯದೆ ಯದ್ವಾ ತದ್ವಾ ಟೆಂಡರ್ ಕರೆದು ಹಾನಿ ಮಾಡಿತ್ತು. ಸುಮಾರು 39 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿದ್ದರು. ಜೊತೆಗೆ ಕೇಂದ್ರ ಸರಕಾರದಿಂದ ನಮಗೆ ಅನ್ಯಾಯ ಮುಂದುವರೆದಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಆದ್ದರಿಂದ ಇಲಾಖೆಗಳಲ್ಲಿರುವ ಹಣ ಹೆಚ್ಚು ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ ಮತ್ತು ಕರ್ತವ್ಯ ನಿಮ್ಮ ಮೇಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News