ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ, ದೋಸೆ ಹಿಟ್ಟಿಗೆ ಭಾರೀ ಬೇಡಿಕೆ
ಬೆಂಗಳೂರು : ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ನಂದಿನಿಯ ದೋಸೆ ಮತ್ತು ಇಡ್ಲಿ ಹಿಟ್ಟಿಗೆ ಗ್ರಾಹಕರು ಮನಸೋತಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟ ಕೇವಲ 3 ದಿನಗಳಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ - ದೋಸೆ ಹಿಟ್ಟು ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮಾರಾಟವನ್ನು ಪೂರೈಕೆ ಮಾಡಲು ಕೆಎಂಎಫ್ ನಿರ್ಧರಿಸಿದೆ.
ಡಿಸೆಂಬರ್ 25ರಂದು ಲೋಕಾರ್ಪಣೆಗೊಂಡಿದ್ದ, ನಂದಿನಿ ಬ್ರ್ಯಾಂಡ್‍ನ ‘ರೆಡಿ ಟು ಕುಕ್’ ನಂದಿನಿ ವೇ ಪ್ರೊಟೀನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟಿಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರ ಸ್ಪಂದನೆ ಉತ್ತಮವಾಗಿದ್ದು, ಬಿಡುಗಡೆಯಾದ 5 ದಿನಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.
ಎರಡು ಮೂರು ದಿನದಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ, ದೋಸೆ ಹಿಟ್ಟು ಮಾರಾಟವಾಗಿದೆ. ನಂದಿನ ಹಿಟ್ಟಿನಲ್ಲಿ ಶೇ.5ರಷ್ಟು ಪ್ರೊಟೀನ್ ಇರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ಸ್ಪೂರ್ತಿಗೊಂಡಿರುವ ನಂದಿನಿ ಮತ್ತಷ್ಟು ದೋಸೆ ಮತ್ತು ಇಡ್ಲಿ ಹಿಟ್ಟು ಸರಬರಾಜು ಮಾಡಲು ಮುಂದಾಗಿದೆ. ಇಡ್ಲಿ ಹಿಟ್ಟು ವಿತರಣೆಗೆ ಪ್ರಸ್ತುತ 5-6 ವಾಹನಗಳಿದ್ದು, ಶೀಘ್ರದಲ್ಲೇ ಇನ್ನೂ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದೆ.
ಡಿ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್), ಮೊದಲ ಬಾರಿಗೆ ಪರಿಚಯಿಸಿರುವ ನಂದಿನಿ ಬ್ರ್ಯಾಂಡ್‍ನ ಪ್ರೊಟೀನ್‍ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಕೆಎಂಎಫ್ ಬಿಡುಗಡೆ ಮಾಡಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಶೇ 5.ರಷ್ಟು ಪ್ರೊಟೀನ್ ಅಂಶವನ್ನು ಮಿಶ್ರ ಮಾಡಲಾಗಿದೆ.
ಎಲ್ಲ ಸುರಕ್ಷತಾ ಮಾನದಂಡಗಳನ್ನೂ ಪರಿಶೀಲಿಸಿ ನಂದಿನಿ ಬ್ರ್ಯಾಂಡ್‍ನ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಗುಣಮಟ್ಟದ ಬಗ್ಗೆ ಸಂಪೂರ್ಣ ಎಚ್ಚರಿಕೆ ವಹಿಸಿದ್ದೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮಾರುಕಟ್ಟೆಯಲ್ಲಿರುವ ಇತರ ಎಲ್ಲ ಬ್ರ್ಯಾಂಡ್‍ಗಳನ್ನೂ ಹಿಂದಿಕ್ಕಿ ಮಾರಾಟ ವಿಸ್ತರಿಸುವ ಗುರಿ ನಮ್ಮ ಮುಂದಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದ್ದರು. ಅದರಂತೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.