ದಸಂಸ ಮುಖಂಡ ಲಕ್ಷ್ಮೀ ನಾರಾಯಣ ನಾಗವಾರ ನಿಧನ

Update: 2024-12-31 13:22 GMT

ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆ ಗೆ ದಾಖಲಾಗಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ, ಪ್ರಗತಿಪರ ಹೋರಾಟಗಾರ ಲಕ್ಷ್ಮೀ ನಾರಾಯಣ ನಾಗವಾರ ಅವರು ಮಂಗಳವಾರ ಸಂಜೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ನಾಗವಾರ ಅವರಿಗೆ 58 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಸಂಘಟನೆಯ ಒಡನಾಡಿಗಳನ್ನು ಅಗಲಿದ್ದಾರೆ.

ಬೆಂಗಳೂರು ನಗರದ ನಾಗವಾರ ಮೂಲದ ಲಕ್ಷ್ಮಿ ನಾರಾಯಣ ಅವರು, ವಿದ್ಯಾರ್ಥಿ ದೆಸೆಯಲ್ಲಿ ದಲಿತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದು, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ.

ಬೆಂಗಳೂರಿನ ಕನಕ ನಗರದಲ್ಲಿ ವಾಸವಾಗಿದ್ದ ಲಕ್ಷ್ಮಿ ನಾರಾಯಣ ಅವರು, ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಹಿನ್ನಲೆಯಲ್ಲಿ ಹೆಬ್ಬಾಳದ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದಲಿತ ಚಳವಳಿ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ, ಡಾ. ಸಿದ್ದಲಿಂಗಯ್ಯ, ದೇವನೂರು ಮಹಾದೇವ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹಲವು ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಲಕ್ಷ್ಮಿ ನಾರಾಯಣ ನಾಗವಾರ ಅವರದ್ದು.

ದಸಂಸ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಲಕ್ಷ್ಮೀ ನಾರಾಯಣ ನಾಗವಾರ, ತಾಲೂಕು, ಜಿಲ್ಲಾ, ವಿದ್ಯಾರ್ಥಿ, ಯುಜನಸಂಘವು ಸೇರಿದಂತೆ ರಾಜ್ಯ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು.

ಲಕ್ಚ್ಮಿ ನಾರಾಯಣ ನಾಗವಾರ ಅವರ ಅಂತ್ಯ ಸಂಸ್ಕಾರ ನಾಳೆ(ಜ.1) ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನಾಗವಾರದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಗವಾರ ಅವರ ನಿಧನಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ. ಮಹದೇವಪ್ಪ, ರಾಜ್ಯ ಸರಕಾರಿ ಎಸ್ಸಿ ಎಸ್ಟಿ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ದಸಂಸ ಮುಖಂಡರು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News