ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ರಿಲೀಫ್ | ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ವಸೂಲಿ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ
ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ತಮ್ಮ ವಿರುದ್ಧ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ವಸೂಲಿ ನೋಟಿಸ್ ಮತ್ತು ಬಂಧನ ವಾರೆಂಟ್ ಪ್ರಶ್ನಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ನೀಡಿದೆ.
ಇತ್ತೀಚೆಗೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ವಸೂಲಿ ನೋಟಿಸ್ ಮತ್ತು ಬಂಧನ ವಾರೆಂಟ್ ಜಾರಿಗೊಳಿಸಿದ್ದರು. ಹೀಗಾಗಿ ರಾಬಿನ್ ಉತ್ತಪ್ಪ ಹೈಕೋರ್ಟ್ ಮೇಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಕಾರ್ಮಿಕ ಇಲಾಖೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ, ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ ಹಾಗೂ ಪುಲಿಕೇಶಿ ನಗರ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಉತ್ತಪ್ಪ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ರಾಬಿನ್ ಉತ್ತಪ್ಪ ಅವರು ಸೆಂಟಾರಸ್ ಲೈಫ್‌ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಆದರೆ, 2020ರಲ್ಲಿಯೇ ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಅವರನ್ನು ಪ್ರಕರಣದಲ್ಲಿ ಭಾಗಿಯನ್ನಾಗಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಅವರಿಗೆ ನೀಡಿರುವ ವಸೂಲಿ ನೋಟಿಸ್ ಮತ್ತು ಪುಲಕೇಶಿ ನಗರ ಪೊಲೀಸರು ಹೊರಡಿಸಿರುವ ಬಂಧನ ವಾರೆಂಟ್ ರದ್ದು ಮಾಡುವಂತೆ ಮನವಿ ಮಾಡಿದರು.
ವಾದ ಆಲಿಸಿದ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.