ಸರ್ವರೂ ಒಪ್ಪಿಕೊಂಡಿರುವ ಬೈಲಾಕ್ಕೆ ಅಧಿಕಾರಿಗಳು ಸಮ್ಮತಿ ಸೂಚಿಸಬೇಕು : ಪರಂಬು ಪೈಸಾರಿಯ ಗಣಪತಿ ಸೇವಾ ಸಮಿತಿ

Update: 2024-12-31 17:34 GMT

ಮಡಿಕೇರಿ : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡಿನ ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ಶ್ರೀಮಂತ, ಬಡವ, ಜಾತಿ, ಜನಾಂಗ ಎನ್ನುವ ಬೇಧಭಾವವಿಲ್ಲದೆ ಹಿಂದೂ ಸಮಾಜದ ಎಲ್ಲಾ ಜನಾಂಗದವರು ಒಂದೇ ಎಂದು ಪರಿಗಣಿಸಲು ಯಾವುದೇ ಸಮುದಾಯದ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯಕ್ಕೆ ಬರಲು ದೇವಾಲಯ ಸಮಿತಿಯ ಬೈಲಾದಲ್ಲಿ ಅವಕಾಶ ನೀಡಿಲ್ಲ. ಸರ್ವರೂ ಒಪ್ಪಿಕೊಂಡಿರುವ ಬೈಲಾ ಇದಾಗಿರುವುದರಿಂದ ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಬೇಕೆಂದು ಎಸ್.ಕಟ್ಟೆಮಾಡು ಪರಂಬು ಪೈಸಾರಿಯ ಗಣಪತಿ ಸೇವಾ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ಉಮೇಶ್ ಹಾಗೂ ಪ್ರಮುಖರು, ಗ್ರಾಮದ ಎಲ್ಲಾ ಜನಾಂಗದವರು ಒಗ್ಗೂಡಿ, ಅವಿರತ ಶ್ರಮವಹಿಸಿ, ಕೋಟ್ಯಾಂತರ ರೂ. ಖರ್ಚು ಮಾಡಿ ಶ್ರೀಮಹಾ ಮೃತ್ಯುಂಜಯ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಒಗ್ಗಟ್ಟು ಹೀಗೆ ಉಳಿಯಬೇಕು, ದೇವರ ಎದುರು ಎಲ್ಲರೂ ಸಮಾನರು ಎನ್ನುವ ಕಾರಣಕ್ಕಾಗಿ ಬೈಲಾದಲ್ಲಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಿಲ್ಲ. ಗೌಡರಿಗೂ ಸಾಂಪ್ರದಾಯಿಕ ಉಡುಪು ಇದೆ, ಆದರೆ ಬೈಲಾದ ಪ್ರಕಾರ ಅವರು ನಡೆದುಕೊಳ್ಳುತ್ತಿದ್ದು, ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಬರುತ್ತಿಲ್ಲ ಎಂದರು.

ಶ್ರೀಮಹಾ ಮೃತ್ಯುಂಜಯ ದೇವಾಲಯ ಸಮಿತಿಯ ಆಡಳಿತ ಮಂಡಳಿಯಲ್ಲಿ 43 ಪದಾಧಿಕಾರಿಗಳಿದ್ದಾರೆ. ಇವರಲ್ಲಿ ಕೊಡವರು, ಗೌಡರು, ಪರಿಶಿಷ್ಟರು ಸೇರಿದಂತೆ ಎಲ್ಲಾ ಜಾತಿ ಜನಾಂಗದವರಿದ್ದಾರೆ. ದೇವಾಲಯದಲ್ಲಿ ಯಾವುದೇ ರೀತಿಯ ಬೇಧಭಾವ, ಮೇಲು ಕೀಳು ಭಾವನೆ ಬರಬಾರದೆನ್ನುವ ಉದ್ದೇಶದಿಂದ ಯಾವುದೇ ಸಮಾಜದ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಬಾರದೆಂದು ಸರ್ವರ ಸಮ್ಮತಿಯೊಂದಿಗೆ ಬೈಲಾದಲ್ಲಿ ವಿಚಾರವನ್ನು ಅಳವಡಿಸಲಾಗಿದೆ. ಆಕ್ಷೇಪ ವ್ಯಕ್ತಪಡಿಸುವುದಾದರೆ ಅಭಿಪ್ರಾಯ ಸಂಗ್ರಹದ ಸಂದರ್ಭವೇ ವ್ಯಕ್ತಪಡಿಸಬೇಕಾಗಿತ್ತು. ಆದರೆ ಜಾತ್ರೋತ್ಸವ ನಡೆಯುತ್ತಿದ್ದಾಗ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.

ಡಿ.27 ರಂದು ಕೊಡವರು ಕೂಡ ನೂರಾರು ಸಂಖ್ಯೆಯಲ್ಲಿ ಸಾಮಾನ್ಯ ಭಕ್ತರಂತೆ ದೇವಾಲಯಕ್ಕೆ ಬಂದಿದ್ದರು. ಆದರೆ ದೇವರ ಜಳಕದ ಸಂದರ್ಭ ಕೆಲವು ಮಂದಿ ಮಾತ್ರ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಬೈಲಾದಲ್ಲಿರುವಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದಾಗ ಭಿನ್ನಾಭಿಪ್ರಾಯ ಮೂಡಿದೆ ಹೊರತು ಯಾವುದೇ ಹಲ್ಲೆ ಪ್ರಕರಣಗಳು ನಡೆದಿಲ್ಲ. ಮಹಿಳೆಯರ ಮೇಲೆ ಹಲ್ಲೆಯಾಗಿಲ್ಲ, ದೇವಾಲಯದ ಸಿಸಿ ಕ್ಯಾಮರಾದಲ್ಲಿ ಎಲ್ಲಾ ಸತ್ಯಾಂಶಗಳು ಸೆರೆಯಾಗಿದೆ. ವಿನಾಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ದೇವಾಲಯಕ್ಕೆ ಒಂದೊಂದು ಕಟ್ಟುಪಾಡು ಇರುವ ಹಾಗೆ ಶ್ರೀ ಮಹಾಮೃತ್ಯುಂಜ ದೇವಾಲಯಕ್ಕೂ ಒಂದು ಕಟ್ಟುಪಾಡು (ಬೈಲಾ)ವನ್ನು ರಚಿಸಿದ್ದು ಸುತ್ತಮುತ್ತಲಿನ ಗ್ರಾಮಸ್ಥರ ಹಾಗೂ ಕೊಡವ ಸಮುದಾಯದ ಭಕ್ತಾಧಿಗಳ ಒಪ್ಪಿಗೆ ಕೂಡ ಇದೆ. ಕೊಡವರು ಕೂಡ ದೇವಾಲಯದ ವಾರ್ಷಿಕೋತ್ಸವಕ್ಕೆ ತನು, ಮನ, ಧನ ಸಹಾಯ ಮಾಡಿದ್ದಾರೆ ಮತ್ತು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಕೊಡವ ಸಮುದಾಯದ ಜನರನ್ನು ದೇವಾಲಯದೊಳಗೆ ಬರಬೇಡಿ ಎಂದು ಹೇಳಲಿಲ್ಲ, ಬದಲಿಗೆ ದೇವಾಲಯದ ಕಟ್ಟುಪಾಡುಗಳನ್ನು (ಬೈಲಾ) ವನ್ನು ಪಾಲಿಸಿ ಒಳಗೆ ಬನ್ನಿ ಎಂದು ಹೇಳಲಾಗಿತ್ತು. ಈ ದೇವಾಲಯವು ಒಂದು ಪುಣ್ಯಕ್ಷೇತ್ರವಾಗಿದ್ದು, ಇಲ್ಲಿ ಎಲ್ಲರೂ ಒಂದೇ ಎನ್ನುವ ನಿರ್ಣಯವನ್ನು ದೇವಾಲಯದ ಸಮಿತಿ ತೆಗೆದುಕೊಂಡಿದೆ. ಈ ನಿರ್ಣಯವನ್ನು ದಿಕ್ಕರಿಸಿದ್ದೆ ಈ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ವರ್ಗೀಯ ಆಚರಣೆಗಳಿಗೆ ಅಥವಾ ಒಂದು ವರ್ಗಕ್ಕೆ ಪ್ರಾಧಾನ್ಯತೆ ನೀಡದಂತೆ ಮಹಾಮೃತ್ಯುಂಜಯ ದೇವಾಲಯ ಸಮಿತಿಯು ರೂಪಿಸಿರುವ ಬೈಲಾಕ್ಕೆ ಕಟ್ಟೆಮಾಡು ಪರಂಬು ಪೈಸಾರಿ ಗ್ರಾಮಸ್ಥರ ಒಪ್ಪಿಗೆ ಇದೆ. ದೇವಾಲಯದಲ್ಲಿ ಯಾರೂ ಮೇಲು ಅಲ್ಲ, ಯಾರೂ ಕೀಳು ಅಲ್ಲ, ಎಲ್ಲರೂ ಸಮಾನರೆ ಎಂದು ಬಿ.ಕೆ.ಉಮೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿದ್ದ ಗಣಪತಿ ಸೇವಾ ಸಮಿತಿಯ ಉಪಾಧ್ಯಕ್ಷ ಪಿ.ತಿಮ್ಮಪ್ಪ, ಎಂ.ಎಸ್.ವೆಂಕಟೇಶ್, ಎಂ.ಪಿ.ಲೋಕೇಶ್, ಬಿ.ಎ.ಜಯರಾಂ ಹಾಗೂ ಜೇನುಕುರುಬರ ಮುತ್ತ ಅವರುಗಳು ಮಹಾಮೃತ್ಯುಂಜಯ ದೇವಾಲಯ ಸಮಿತಿಯ ಪರ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News