‘ಕೆಂಗಲ್ ಹನುಮಂತಯ್ಯ’ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯ್ಕೆ

Update: 2024-06-08 17:24 GMT

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿಷ್ಟಿತ ‘ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿದ ಅವರು, ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯ, ಕಲೆ, ಪರಂಪರೆ ಪೋಷಕರಾಗಿರುವ ಇಲ್ಲವೆ ಮೇಲ್ಕಂಡ ಕ್ಷೇತ್ರಗಳಲ್ಲಿ ಕನಿಷ್ಟ 25 ವರ್ಷಗಳಿಂದ ಸೇವೆಯಲ್ಲಿ ನಿರತರಾದˌ 50 ವರ್ಷದ ವಯೋಮಾನ ಮೀರಿದ ವ್ಯಕ್ತಿ, ಸಂಘ-ಸಂಸ್ಥೆಗಳನ್ನು ಆಯ್ಕೆ ಮಾಡುವುದು ಈ ದತ್ತಿ ನಿಧಿಯ ಆಶಯವಾಗಿದೆ. 2016ರಿಂದಲೂ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ಪರಿಷತ್ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಮೂರು ಸಲ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಯಡಿಯೂರಪ್ಪನವರು ಸದಾ ಕನ್ನಡ ಮತ್ತು ಸಂಸ್ಕೃತಿಗೆ ಕೊಡುಗೆಗಳನ್ನು ನೀಡಿರುವುದು ಹಾಗೂ ಕಸಾಪದ ಕಾರ್ಯ ನಿರ್ವಹಣೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಘಟಿತವಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗಿರುವ ಕನ್ನಡದ ಬಗೆಗಿನ ಕಾಳಜಿ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ಗಮನಿಸಿ ಈ ಪುರಸ್ಕಾರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ, ಕನ್ನಡ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ದತ್ತಿದಾನಿಗಳ ಪರವಾಗಿ ಟಿ.ತಿಮ್ಮೇಶ್ ಅವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News