ಬೌದ್ಧಧರ್ಮ ಪ್ರಚಾರಕ್ಕೊಳಪಟ್ಟಿಲ್ಲ, ಧರ್ಮವೇ ಸೆಳೆಯುತ್ತಿತ್ತು: ಮೂಡ್ನಾಕೂಡು ಚಿನ್ನಸ್ವಾಮಿ

Update: 2023-10-10 17:12 GMT

ಬೆಂಗಳೂರು, ಅ.10: ಮೊದಲಿನಿಂದಲೂ ಯಾರೂ ಬೌದ್ಧ ಧರ್ಮವನ್ನು ಪ್ರಚಾರ ಮಾಡಿಲ್ಲ. ಧರ್ಮವೇ ತನ್ನತ್ತ ಎಲ್ಲರನ್ನೂ ಸೆಳೆಯುತ್ತಿತ್ತು. ಬೌದ್ಧರು ಎಲ್ಲೇ ಹೋದರು ಅವರ ಹಿಂದೆ ಜನರು ಸೆಳೆಯುತ್ತಿದ್ದರು. ಅದು ಬೌದ್ಧ ಧರ್ಮಕ್ಕಿರುವ ಶಕ್ತಿ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬಣ್ಣಿಸಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತೀಯ ಸಮಾಜದ ಏಳಿಗೆಗೆ ಬೌದ್ಧ ಧಮ್ಮ ಒಂದೇ ದಾರಿ ಎಂಬ ಆಶಯದಡಿ ಕೇರಳದಿಂದ ನಾಗಪುರದ ವರೆಗೆ ನಡೆಯುತ್ತಿರುವ ‘ಅಶೋಕ ಅಂಬೇಡ್ಕರ್ ಧಮ್ಮ ಯಾತ್ರೆ’ಯು ಕರ್ನಾಟಕವನ್ನು ಪ್ರವೇಶಿಸಿದ ಹಿನ್ನೆಲೆ ಯಾತ್ರೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧನ ಪ್ರವಚನ ಕೇಳುತ್ತಿದ್ದ ಯಶ ಎಂಬ ಯುವಕ ಮೊದಲು ಬೌದ್ಧ ಧರ್ಮಕ್ಕೆ ಮತಾಂತರಗೊಂಡ, ತದನಂತರದಲ್ಲಿ ಎಲ್ಲರೂ ತಂಡೋಪತಂಡವಾಗಿ ಮತಾಂತರವಾದರು. ಬೇರೆ ಧರ್ಮಗಳು ಆಕ್ರಮಣಕಾರಿಯಾಗಿ ಪ್ರಚಾರ ಕೈಗೊಂಡು ನೆಲೆ ಇಲ್ಲದೆ ಹೋದವು. ಆದರೆ ಬೌದ್ಧ ಧರ್ಮ ತನ್ನ ವಿಚಾರಗಳಿಂದ ಜನರನ್ನು ಸೆಳೆಯಿತು ಎಂದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಭಾರತವನ್ನು ಬೌದ್ಧಮಯ ಮಾಡಿದ್ದು ಸಾಮ್ರಾಟ ಅಶೋಕ. ಅಂತಹ ಮಹಾನ್ ನಾಯಕನನ್ನು ಇಂದು ಮರೆಮಾಚಿಸಲಾಗುತ್ತಿದೆ. ಅಹಿಂಸೆ, ಸತ್ಯ, ನ್ಯಾಯ, ಶೋಷಣೆ ವಿರುದ್ಧ ಹೋರಾಡಿದ ಬುದ್ಧ, ಅಶೋಕ, ಅಂಬೇಡ್ಕರ್ ಅವರ ನೆರಳಿನಲ್ಲಿ ನಾವೆಲ್ಲರೂ ಬದುಕಬೇಕಿದೆ ಎಂದರು.

ಭಾರತದ ನೆಲವನ್ನು ಅಗೆದಷ್ಟು ನಮಗೆ ಬುದ್ಧನ ಚಿಂತನೆಗಳನ್ನು ದೊರೆಯುತ್ತವೆ. ನಾವೆಲ್ಲರೂ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು, ಸುಳ್ಳಿನ ಮಂದಿರಗಳನ್ನು ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾವಳ್ಳಿ ಶಂಕರ್ ತಿಳಿಸಿದರು.

ಹೋರಾಟಗಾರ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಇಂದು ಬುದ್ಧ ಭಾರತಕ್ಕೆ ಬಹಳ ಅನಿವಾರ್ಯ. ಭಾರತಕ್ಕೆ ಬುದ್ಧ, ಬಸವ, ಭೀಮ ಬೆಳಕನ್ನು ನೀಡಿದ್ದಾರೆ. ಆದರೆ ಇಂದು ಅನೇಕರು ಭಾರತದ ನೆಲದಲ್ಲಿ ಕೌರ್ಯ, ಹಿಂಸೆ, ಅಧರ್ಮ, ದಬ್ಬಾಳಿಕೆ, ದೌರ್ಜನ್ಯವನ್ನು ಬಿತ್ತಲು ಹೊರಡಿದ್ದಾರೆ. ಇದನ್ನು ಪ್ರಜ್ಞಾವಂತರಾಗಿ ನಾವೆಲ್ಲ ಅರಿತುಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಹೋರಾಟಗಾರ್ತಿ ವೆಂಕಮ್ಮ, ಜನಪರ ಹೋರಾಟಗಾರ ಹುಲಿಕುಂಟೆಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News