ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ʼಗ್ಯಾರಂಟಿʼ ನೆಚ್ಚಿದ ಮತದಾರ | ಸರಕಾರ ಉರುಳಿಸ ಹೊರಟವರಿಗೆ ಸ್ಪಷ್ಟ ಸಂದೇಶ ರವಾನೆ

Update: 2024-11-23 14:42 GMT

ಉಪಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತದೆ. ಈ ಸರಕಾರ ಬೇಗ ಉರುಳುತ್ತದೆ. ಉಪಚುನಾವಣೆ ಬಳಿಕ ಈ ಸರಕಾರವನ್ನು ಉರುಳಿಸುತ್ತೇವೆ, ಈ ಸರಕಾರ ಉಳಿಯಲ್ಲ, ಬೇಗ ಪತನವಾಗುತ್ತೆ ಎಂದು ಕಳೆದ ಐದಾರು ತಿಂಗಳಿಂದ ಬಿಜೆಪಿ ಹಾಗು ಜೆಡಿಎಸ್‌ನ ನಾಯಕರು ಸತತವಾಗಿ ಯಾವುದೇ ಮುಲಾಜಿಲ್ಲದೆ ನೇರವಾಗಿಯೇ ಹೇಳುತ್ತಾ ಬಂದಿರುವ ಮಾತುಗಳಿವು.

ರಾಜ್ಯದ ಜನರಿಂದ ಪೂರ್ಣ ಬಹುಮತ ಪಡೆದಿರುವ, ಸರಕಾರವೊಂದನ್ನು ನಾವೇ ಅವಧಿಗೆ ಮುನ್ನವೇ ಉರುಳಿಸುತ್ತೇವೆ ಎಂದು ಜನವಿರೋಧಿಯಾಗಿ ರಾಜ್ಯದ ಬಿಜೆಪಿ ಹಾಗು ಜೆಡಿಎಸ್ ಮುಖಂಡರು ಮಾತನಾಡುತ್ತಿದ್ದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಂತೂ ಉಪಚುನಾವಣೆ ಮುಗಿದ ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದು ಬಿಡುತ್ತದೆ ಎಂದು ಬಹಳ ಅವಸರದಲ್ಲಿದ್ದರು. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಅಧಿಕಾರ ಪೂರ್ಣಗೊಳಿಸುವುದಿಲ್ಲ. ಮತ್ತೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದರು.

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಗೆದ್ದರೆ ಈ ಸರಕಾರ ಇರುವುದಿಲ್ಲ ಎಂದೇ ಕುಮಾರಸ್ವಾಮಿ ಹೇಳಿದ್ದರು. ಉಪಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮೂರು ಕ್ಷೇತ್ರಗಳನ್ನು ಗೆದ್ದರೆ ಈ ಸರಕಾರ ಉಳಿಯಲ್ಲ. ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು ಎಂದು ಹೇಳಿದ್ದರು.

ಈಗ ರಾಜ್ಯದ ಮೂರೂ ಕ್ಷೆತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಸೋತಿವೆ. ಇರೋ ಸ್ಥಾನಗಳನ್ನು ಕಳಕೊಂಡಿವೆ. ಕುಮಾರಸ್ವಾಮಿ ಹಾಗು ಬಸವರಾಜ ಬೊಮ್ಮಾಯಿ ಇಬ್ಬರ ಪುತ್ರರೂ ಸೋತಿದ್ದಾರೆ. ಚನ್ನಪಟ್ಟಣದಲ್ಲಿ ಅದೆಷ್ಟೇ ಕಸರತ್ತು ಮಾಡಿದರೂ ಜೆಡಿಎಸ್ ಸೋತಿದೆ. ಕಾಂಗ್ರೆಸ್ ಗೆದ್ದಿದೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲೂ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಒಂದು ಕ್ಷೇತ್ರದ ಜೊತೆ ವಿಪಕ್ಷಗಳ ಶಾಸಕರಿದ್ದ ಎರಡು ಕ್ಷೇತ್ರಗಳನ್ನೂ ಗೆದ್ದುಕೊಂಡಿದೆ. ಅಲ್ಲಿಗೆ ಕರ್ನಾಟಕದಲ್ಲಿ ಸರಕಾರ ಉರುಳಿಸಲು ಹೊರಟಿದ್ದ ಬಿಜೆಪಿ, ಜೆಡಿಎಸ್ ಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ.

ನಾವು ಈ ರಾಜ್ಯದ ಜನರು ಆಯ್ಕೆ ಮಾಡಿರುವ ಸರಕಾರ ಉರುಳಿಸಲು ನಿಮಗೆ ಯಾವುದೇ ಅಧಿಕಾರವಿಲ್ಲ, ನೀವು ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡುವುದೂ ಬೇಡ ಎಂದು ರಾಜ್ಯದ ಜನರ ಬಿಜೆಪಿ ಹಾಗು ಜೆಡಿಎಸ್ ಗಳಿಗೆ ಸಂದೇಶ ರವಾನಿಸಿದ್ದಾರೆ. ಸರಕಾರ ತರೋದು, ಅದನ್ನು ಕೆಳಗಿಳಿಸೋದು ರಾಜ್ಯದ ಮತದಾರರು, ನೀವಲ್ಲ, ನಿಮಗೆ ಆ ಕೆಲಸ ನಾವು ಕೊಟ್ಟಿಲ್ಲ ಎಂದು ರಾಜ್ಯದ ಜನರು ಸ್ಪಷ್ಟವಾಗಿ ಹೇಳಿದ್ದಾರೆ.

ಬಿಜೆಪಿ ವಕ್ಫ್ ಇತ್ಯಾದಿ ಹೆಸರಲ್ಲಿ ಎಗ್ಗಿಲ್ಲದೆ ಹರಡಿದ ದ್ವೇಷ ಹಾಗು ಸುಳ್ಳುಗಳನ್ನು ರಾಜ್ಯದ ಮೂರೂ ಕ್ಷೇತ್ರಗಳ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಬಿಜೆಪಿ ಕೈಯಲ್ಲಿದ್ದ ಕ್ಷೇತ್ರವನ್ನೂ ಅದರಿಂದ ಜನ ಕಿತ್ತುಕೊಂಡು ಕಾಂಗ್ರೆಸ್ ಕೈಗೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಸರಕಾರದಲ್ಲಿ ಹತ್ತು ತಪ್ಪುಗಳಿರಬಹುದು, ಅದರ ವಿರುದ್ಧ ಕಾನೂನು ಹೋರಾಟ, ಬೀದಿಯಲ್ಲಿ ಹೋರಾಟ ಎಲ್ಲವೂ ಆಗಲಿ. ಆದರೆ ಬಹುಮತ ಇರುವ ಸರಕಾರವನ್ನು ಅವಧಿ ಮುಗಿಯುವ ಮುನ್ನವೇ ಉರುಳಿಸುತ್ತೇವೆ ಅನ್ನೋದು ಸರಿಯಲ್ಲ, ಅದು ಜನವಿರೋಧಿ, ಜನಾದೇಶ ವಿರೋಧಿ ಹೇಳಿಕೆ ಎಂದು ರಾಜ್ಯದ ಜನರು ಶಿಗ್ಗಾಂವಿ, ಚನ್ನಪಟ್ಟಣ ಹಾಗು ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೇಳಿದ್ದಾರೆ.

ಒಟ್ಟಾರೆ ಸರಕಾರ ಉರುಳಿಸುವ ತುರ್ತಿನಲ್ಲಿದ್ದ ಬಿಜೆಪಿ ಹಾಗು ಜೆಡಿಎಸ್ ಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಸರಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ದೊಡ್ಡ ಬಲ ಬಂದಿದೆ.

ಜನರಿಗೆ ಐದು ಗ್ಯಾರಂಟಿ ಕೊಟ್ಟು ಏನೂ ಪ್ರಯೋಜನ ಆಗುತ್ತಿಲ್ಲ ಎಂಬ ಕಾಂಗ್ರೆಸ್ ಒಳಗೇನೇ ಹಲವರು ನೀಡುತ್ತಿದ್ದ ಅಸಹನೆಯ ಹೇಳಿಕೆಗಳಿಗೆ ಜನ ಉತ್ತರ ಕೊಟ್ಟಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಎಂದು ಅಪಪ್ರಚಾರ ಮಾಡುತ್ತಿದ್ದ, ಸುಳ್ಳು ಹೇಳುತ್ತಿದ್ದ ಬಿಜೆಪಿ ಹಾಗು ಜೆಡಿಎಸ್‌ಗಳಿಗೆ ಪಾಠ ಕಲಿಸಿದ್ದಾರೆ

ನಮ್ಮ ದುಡ್ಡಲ್ಲಿ ನಮಗೆ ಕೊಟ್ಟಿದ್ದು ಬಿಟ್ಟಿ ಅಲ್ಲ,ಅದು ನಮ್ಮ ಹಕ್ಕು, ಕಾಂಗ್ರೆಸ್ ನಮಗೆ ಅದನ್ನು ಕೊಟ್ಟಿದ್ದರಿಂದ ನಾವು ಅದರ ಕೈ ಹಿಡಿದಿದ್ದೇವೆ, ದ್ವೇಷ, ಸುಳ್ಳಿನ ಅಪಪ್ರಚಾರವನ್ನು ಸೋಲಿಸಿದ್ದೇವೆ ಎಂದು ರಾಜ್ಯದ ಜನ ಹೇಳಿದ್ದಾರೆ. ಸರಕಾರ ಉರುಳಿಸಲು ಹೊರಟಿದ್ದವರನ್ನು ಜನ ಉಪಚುನಾವಣೆಯಲ್ಲಿ ಉರುಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News