ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ : ನಾಳೆ(ನ.13) ಮತದಾನ
ಬೆಂಗಳೂರು : ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ(ನ.13) ಮತದಾನ ನಡೆಯಲಿದ್ದು, ಭಾರತೀಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಈಗಾಗಲೆ ಮತಯಂತ್ರಗಳ ಜೊತೆಗೆ ಮತಗಟ್ಟೆಗಳಿಗೆ ತಲುಪಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಮನಗರ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮತದಾರರ ಸಹಾಯಕ್ಕಾಗಿ ಕಂಟ್ರೋಲ್ ರೂಮ್, ಸಹಾಯವಾಣಿ, ದೂರಿನ ಕೊಠಡಿ, ಕಾಲ್ ಸೆಂಟರ್‌ಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು, ಅವು 24/7 ಕಾರ್ಯ ನಿರ್ವಹಿಸಲಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(ಚನ್ನಪಟ್ಟಣ), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಸಂಸದ ಈ.ತುಕಾರಾಮ್(ಸಂಡೂರು) ರಾಜೀನಾಮೆಯಿಂದ ತೆರವಾಗಿದ್ದ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನ.23ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನೇರ ಹಣಾಹಣಿಯಿದೆ. ಸಂಡೂರಿನಲ್ಲಿ ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಸ್ಪರ್ಧಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಹುರಿಯಾಳಾಗಿದ್ದು, ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಣಕ್ಕಿಳಿದಿದ್ದಾರೆ.
ಸರಿ ಸುಮಾರು ಒಂದು ತಿಂಗಳಿನಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚಾರಗಳನ್ನು ನಡೆಸಿದ್ದು, ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಮತದಾರರ ಮನಗೆಲ್ಲಲು ಅಭ್ಯರ್ಥಿಗಳು, ಮುಖಂಡರು ನಾನಾ ಕಸರತ್ತುಗಳನ್ನು ನಡೆಸಿದ್ದಾರೆ. ಅಂತಿಮವಾಗಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.
ಶಿಗ್ಗಾಂವಿ ಕ್ಷೇತ್ರ: ಪುರುಷ ಮತದಾರರು-1,21,443, ಮಹಿಳಾ ಮತದಾರರು-1,16,076, ಸೇವಾ ಮತದಾರರು-144, ತೃತೀಯ ಲಿಂಗಿಗಳು-6 ಸೇರಿದಂತೆ ಒಟ್ಟು 2,37,669 ಮತದಾರರಿದ್ದಾರೆ. ಈ ಪೈಕಿ ಯುವ ಮತದಾರರು-5,150, ದಿವ್ಯಾಂಗ ಮತದಾರರು-5,253, 85 ವರ್ಷ ಮೇಲ್ಪಟ್ಟ ಮತದಾರರು-3,139, 100 ವರ್ಷ ಮೇಲ್ಪಟ್ಟ 91 ಮತದಾರರು ಹಾಗೂ ಎನ್‍ಆರ್‌ಐ ಮತದಾರರು ಓರ್ವರಿದ್ದಾರೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಸಂಡೂರು ಕ್ಷೇತ್ರ: ಪುರುಷ ಮತದಾರರು-1,17,739, ಮಹಿಳಾ ಮತದಾರರು-1,18,279, ಸೇವಾ ಮತದಾರರು-56, ತೃತೀಯ ಲಿಂಗಿಗಳು-29 ಸೇರಿದಂತೆ ಒಟ್ಟು 2,36,405 ಮತದಾರರಿದ್ದಾರೆ. ಈ ಪೈಕಿ ಯುವ ಮತದಾರರು-4,820, ದಿವ್ಯಾಂಗ ಮತದಾರರು-2,835, 85 ವರ್ಷ ಮೇಲ್ಪಟ್ಟ ಮತದಾರರು-1,523, 100 ವರ್ಷ ಮೇಲ್ಪಟ್ಟ ಮತದಾರರು-69, ಒಟ್ಟು 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚನ್ನಪಟ್ಟಣ ಕ್ಷೇತ್ರ: ಪುರುಷ ಮತದಾರರು-1,12,368, ಮಹಿಳಾ ಮತದಾರರು-1,20,620, ಸೇವಾ ಮತದಾರರು-47, ತೃತೀಯ ಲಿಂಗಿಗಳು-8 ಸೇರಿದಂತೆ ಒಟ್ಟು 2,32,996 ಮತದಾರರಿದ್ದಾರೆ. ಈ ಪೈಕಿ ಯುವ ಮತದಾರರು-4,324, ದಿವ್ಯಾಂಗ ಮತದಾರರು-3,013, 85 ವರ್ಷ ಮೇಲ್ಪಟ್ಟ ಮತದಾರರು-1,861, 100 ಮೇಲ್ಪಟ್ಟ ಮತದಾರರು-37 ಹಾಗೂ ಎನ್‍ಆರ್‌ಐ ಮತದಾರರು-6 ಮಂದಿ ಇದ್ದಾರೆ, ಒಟ್ಟು 276 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಮೂರು ಕ್ಷೇತ್ರಗಳಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ, ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ನ.14ರ ಬೆಳಗ್ಗೆ 6 ಗಂಟೆಯ ವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ.
ಪರ್ಯಾಯ ದಾಖಲೆಗಳು: ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ(ಎಪಿಕ್ ಕಾರ್ಡ್) ಅಥವಾ ಆಧಾರ್ ಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್.
ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿಯ ದಾಖಲೆ, ಕೇಂದ್ರ, ರಾಜ್ಯ ಸರಕಾರ, ಪಿಎಸ್‍ಯು, ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದ, ಶಾಸಕ, ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಕಾರ್ಡ್.
ಎಡಗೈ ತೋರು ಬೆರಳಿಗೆ ಶಾಯಿ: ಈ ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುವುದು.
ಮತ ಎಣಿಕೆ ಕೇಂದ್ರಗಳು: ಶಿಗ್ಗಾಂವಿ ಕ್ಷೇತ್ರದ ಮತಗಳ ಎಣಿಕೆಯನ್ನು ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಸಂಡೂರು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯನ್ನು ಬಳ್ಳಾರಿ ಜಿಲ್ಲೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯನ್ನು ರಾಮನಗರ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಗುವುದು.
ವೆಬ್ ಕ್ಯಾಸ್ಟಿಂಗ್: ಶಿಗ್ಗಾಂವಿ ಕ್ಷೇತ್ರದ 121, ಸಂಡೂರು ಕ್ಷೇತ್ರದ 127 ಹಾಗೂ ಚನ್ನಪಟ್ಟಣ ಕ್ಷೇತ್ರದ ಎಲ್ಲ 276 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಒಂದು ಯುವ ಮತಗಟ್ಟೆ, ಒಂದು ದಿವ್ಯಾಂಗರು ನಿರ್ವಹಿಸುವ ಮತದಾನ ಕೇಂದ್ರ ಹಾಗೂ ಒಂದು ವಿಷಯ ಆಧಾರಿತ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ.