ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ : ಬಿ.ವೈ.ವಿಜಯೇಂದ್ರ

Update: 2024-10-07 07:59 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು : ʼಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಟ್ಟೇ ಕೊಡುತ್ತಾರೆʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

 ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಂದು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹವನ್ನು ಬಿಜೆಪಿ ನಿರಂತರವಾಗಿ ಮಾಡುತ್ತ ಬಂದಿದೆ. ನಮ್ಮ ವಿಚಾರಗಳು ಸ್ಪಷ್ಟ ಇದೆʼ ಎಂದು ತಿಳಿಸಿದರು.

ʼಸಿದ್ದರಾಮಯ್ಯನವರ ನೇತೃತ್ವದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಸರಕಾರ ಬಂದ ಮೇಲೆ ಅಭಿವೃದ್ಧಿ ಎಂಬುದು ಸ್ಥಗಿತ ಎಂಬುದಕ್ಕಿಂತ ಶುರುವೇ ಆಗಿಲ್ಲ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರ ನಡುವೆ ಜನರೂ ಈ ಸರಕಾರದ ಬಗ್ಗೆ ವಿಶ್ವಾಸ ಕಳಕೊಂಡಿದ್ದಾರೆ. ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ಪಾರದರ್ಶಕ ತನಿಖೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿದೆ. ಭಂಡತನ ಮಾಡುವುದು ಅವರಿಗೆ ಶೋಭೆ ತರುವುದಿಲ್ಲʼ ಎಂದರು.

ಒಳಮೀಸಲಾತಿ ವಿಷಯದಲ್ಲಿ ಪ್ರಾಮಾಣಿಕತೆಯ ಕೊರತೆ :

ಒಳಮೀಸಲಾತಿ ಬಗ್ಗೆ ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ಜಾತಿಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದೇ ಆದರೆ, ಹಿಂದಿನ ಅವಧಿಯಲ್ಲಿ ಕೈಸೇರಿದ್ದ ವರದಿಯನ್ನು ಅಂದೇ ಅನುಷ್ಠಾನ ಮಾಡಬಹುದಿತ್ತು. ಆಗ ಏಕೆ ಮಾಡಿಲ್ಲ? ಈಗ ಸಿಎಂ ಕುರ್ಚಿ ಅಲ್ಲಾಡುತ್ತಿರುವಾಗ ತಕ್ಷಣ ಅವರಿಗೆ ಜ್ಞಾನೋದಯ ಆಗಿದೆ. ನೆನಪು ಕೂಡ ಆಗಿದೆ ಎಂದು ಆಕ್ಷೇಪಿಸಿದರು.

ಟೋಲ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ :

ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೇವೆ. ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಮ್ಮ ಜಿಲ್ಲೆಯಲ್ಲಿ 2 ಟೋಲ್ ಇವೆ. ಶಿಕಾರಿಪುರ ತಾಲ್ಲೂಕಿನ ಟೋಲ್ ನಿಂದ ರೈತರು, ಬಡವರಿಗೆ ಅನಾನುಕೂಲ ಆಗಿದೆ. ಮೂರು ಜಿಲ್ಲೆಗಳ ಜನರು ಈ ಹೈವೇ ಉಪಯೋಗಿಸುತ್ತಿದ್ದು, ಒಂದೇ ಜಿಲ್ಲೆಯಲ್ಲಿ 2 ಟೋಲ್ ಇವೆ. ಟೋಲ್ ವರ್ಗಾಯಿಸಿ ಬಡವರಿಗೆ ಪ್ರಯೋಜನ ದೊರಕಿಸಿಕೊಡಲು ಕೋರಿದ್ದಾಗಿ ವಿವರಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News