ಅಧಿವೇಶನ | ಅತಿವೃಷ್ಟಿಯಿಂದ ಮನೆ ಕಳಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ.ಕೊಡಿ : ಬಿ.ವೈ.ವಿಜಯೇಂದ್ರ

Update: 2024-07-22 14:05 GMT

ಬೆಂಗಳೂರು : ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಬಡವರಿಗೆ ಯಡಿಯೂರಪ್ಪ ಅವರ ಅವಧಿಯಲ್ಲಿದ್ದಂತೆ 5ಲಕ್ಷ ರೂ.ನೆರವು ನೀಡಬೇಕು ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಸೋಮವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಹಿಂದೆ ಎನ್‍ಡಿಆರ್‌ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡ ಬಡವರಿಗೆ ಸುಮಾರು 1ಲಕ್ಷ ರೂ. ನೀಡಲಾಗುತ್ತಿದ್ದು, ಅದು ಸಾಕಾಗುವುದಿಲ್ಲ. ಹೀಗಾಗಿ ಬಡವರಿಗೆ ನೆರವಾಗುವ ದೃಷ್ಟಿಯಿಂದ 5 ಲಕ್ಷ ರೂ.ನೀಡುವ ನಿರ್ಧಾರವನ್ನು ಬಿ.ಎಸ್.ಯಡಿಯೂರಪ್ಪರ ನೇತೃತ್ವದ ಬಿಜೆಪಿ ಸರಕಾರವು ಕೈಗೊಂಡಿತ್ತು ಎಂದು ವಿವರಿಸಿದರು.

ಗೋಡೆ ಕುಸಿದ ಮನೆಗೆ ಎನ್‍ಡಿಆರ್‌ ಎಫ್ ನಿಯಮದ ಪ್ರಕಾರ 40 ಸಾವಿರ ರೂ. ಕೊಡುತ್ತಿದ್ದರು. ಅದನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ ರೂ. ಕೊಡುತ್ತಿದ್ದರು ಎಂದ ಅವರು, ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟಿಸುತ್ತಿದೆ. ನಾನು ಈಗಾಗಲೇ ಶಿಕಾರಿಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮಳೆ ಜಾಸ್ತಿಯಾದ ಪರಿಣಾಮ ಮನೆಗಳು, ಮನೆ ಗೋಡೆಗಳು ಕುಸಿದು ಬೀಳುತ್ತಿವೆ ಎಂದರು.

ಬಿಜೆಪಿ ಸದಸ್ಯ ಸಿದ್ದು ಸವದಿ ಮಾತನಾಡಿ, ‘ಹಲವು ಕಡೆ ಪ್ರವಾಹ ಉಂಟಾಗಿ ಗುಡ್ಡ ಕುಸಿತವಾಗಿದೆ. ಅದರಲ್ಲೂ ಅನೇಕ ಚಾಲಕರು ವಾಹನಗಳ ಸಮೇತ ಸಿಲುಕಿಕೊಂಡಿದ್ದಾರೆ. ಸರಕಾರ ತುರ್ತು ಪರಿಹಾರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಸಂತ್ರಸ್ತರ ನೆರವಿಗಾಗಿ ರಾಜ್ಯ ಸರಕಾರ ಅರೆಸೇನಾ ಪಡೆಯನ್ನು ಕರೆಯಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಸದಸ್ಯ ವೇದವ್ಯಾಸ ಮಾತನಾಡಿ, ಪರಿಹಾರ ಪಡೆಯಬೇಕಾದರೆ ದಾಖಲೆಗಳನ್ನು ಉಲ್ಲೇಖ ಮಾಡುವ ವ್ಯವಸ್ಥೆ ಇದೆ.ಇದರಿಂದ ಸಂತ್ರಸ್ತರಿಗೆ ತುರ್ತು ಪರಿಹಾರ, ಸಹಾಯಧನ ಮಾಡಲು ಆಗುತ್ತಿಲ್ಲ. ಕೆಲ ದಾಖಲೆ, ನಿಯಮಗಳನ್ನು ಅಧಿಕಾರಿಗಳಿಗೆ ಒದಗಿಸುವ ಪ್ರಕ್ರಿಯೆ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News