ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ : ವಿಜಯೇಂದ್ರ

Update: 2024-08-29 09:19 GMT

ಬೆಂಗಳೂರು: ಮಹಿಳಾ ದೌರ್ಜನ್ಯದ ಸಂದರ್ಭದಲ್ಲೂ ರಾಜ್ಯದ ಕಾಂಗ್ರೆಸ್ ಸರಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ವಿಜಯೇಂದ್ರ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಜನರು ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಜನವಿರೋಧಿ ಸರಕಾರ. ವಿಪಕ್ಷವಾಗಿದ್ದಾಗ ಹೋರಾಟಗಳು ಅನಿವಾರ್ಯ. ಚುನಾವಣೆ ಬಂದಾಗ ಮಾತ್ರ ಹೋರಾಟ ಮಾಡಿದರೆ ಅದು ಜನತೆಗೆ ಮಾಡಿದ ಅವಮಾನ ಮತ್ತು ಅನ್ಯಾಯ. ರಾಜ್ಯದ ಚುಕ್ಕಾಣಿ ಹಿಡಿದ ಸರಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತದೋ ಆಗ, ರಾಜ್ಯದ ಜನರ ಪರವಾಗಿ ಹೋರಾಡುವುದು ನಮ್ಮ ಕರ್ತವ್ಯ ಎಂದು ನುಡಿದರು.

ದೌರ್ಜನ್ಯ ಹೆಚ್ಚಾಗಿದೆ : ಈ ದುಷ್ಟ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣದ ವಿರುದ್ಧ ಹೋರಾಟಗಳು ನಡೆದಿವೆ. ಮಹಿಳಾ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿ, ಗೃಹ ಸಚಿವ, ಸಚಿವರ ನಡವಳಿಕೆ ಪ್ರಮುಖವಾಗುತ್ತದೆ ಎಂದು ವಿಶ್ಲೇಷಿಸಿದರು.

 ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ :ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರದಿದ್ದರೆ ಗ್ಯಾರಂಟಿ ಸ್ಥಗಿತ ಎಂದು ಬೆದರಿಸಿದ್ದರು. ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಎಂದು ಟೀಕಿಸಿದರು.

ಸದಸ್ಯತ್ವ ಅಭಿಯಾನದ ಮೂಲಕ ಮಹಿಳಾ ಮೋರ್ಚಾವನ್ನು ಸದೃಢಪಡಿಸಿ ಎಂದು ಹೇಳಿದ ಅವರು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹಿರಿಯರ ತಪಸ್ಸು, ಕಾರ್ಯಕರ್ತರ ಶ್ರಮ, ಅವಿರತ ಹೋರಾಟ ಕಾರಣ ಎಂದು ವಿಶ್ಲೇಷಿಸಿದರು.

ಈಚೆಗೆ ನಡೆದ ಬೆಂಗಳೂರು- ಮೈಸೂರು ಪಾದಯಾತ್ರೆ ನನಗೆ ರಾಜ್ಯಾಧ್ಯಕ್ಷನಾಗಿ ಮೊದಲ ಆಂದೋಲನ. ಮಹಿಳೆಯರು ಸೇರಿದ್ದು, ಪಾದಯಾತ್ರೆಗೆ ಹೊಸ ಹುಮ್ಮಸ್ಸನ್ನು ಮಹಿಳಾ ಮೋರ್ಚಾವೂ ನೀಡಿತ್ತು ಎಂದು ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಕು.ಕೆ. ಮಂಜುಳ ಅವರು ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ನಿರ್ದಾಕ್ಷಿಣ್ಯ ಕ್ರಮ ಅಗತ್ಯ. ಆಗ ದುಷ್ಟರು, ದುರುಳರು, ಕ್ರಿಮಿಗಳು ಮನೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಮತ್ತು ಮಹಿಳಾ ಮೋರ್ಚಾ ರಾಜ್ಯ ಉಸ್ತುವಾರಿ ಸೋನಲ್ ಬೆನ್ ಪಟೇಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಡಾ.ಶೋಭಾ, ಮಹಿಳಾ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News