ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ತಾತ್ಕಾಲಿಕ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2023-11-12 16:58 GMT

ಮೈಸೂರು,ನ.12: ಶಾಸಕ ಬಿ.ವೈ.ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ತಾತ್ಕಾಲಿಕ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿಳಿಸಿದ್ದಾರೆ. 

ಕಾಂಗ್ರೆಸ್‌‍ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನಿಯರ್‌ ನಾಯಕನಿಗೆ ಪಟ್ಟ ಕಟ್ಟಿ ವರ್ಷಾನುಗಟ್ಟಲೆ ದುಡಿದವರನ್ನು ಕಡೆಗಣಿಸಲಾಗಿದೆ. ಜೂನ್‌ ನಂತರ ಆ ಸ್ಥಾನವನ್ನೂ ಕಿತ್ತುಕೊಳ್ಳಲಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಸುಪುತ್ರ ಮತ್ತು 2023ರ ಚುನಾವಣೆಯಲ್ಲಿ ಲಿಂಗಾಯತರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಲ್‌.ಸಂತೋಷ್‌ ಶೆಕ್ಸ್ ಪಿಯರ್‌ ನಾಟಕದಂತೆ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದರು.

ಲಿಂಗಾಯತ ನಾಯಕರಾದ ಬಿ.ಸಿ.ಪಾಟೀಲ್‌, ಮುರುಗೇಶ ನಿರಾಣಿ, ವಿ.ಸೋಮಣ್ಣ, ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ತುಳಿದರು. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿಯನ್ನು ಹೊರಗೆ ತಳ್ಳಿದರು. ಹಾಗಾಗಿ ಲಿಂಗಾಯತ ಸಮಾಜ ಈ ನಾಟಕವನ್ನು ನಂಬಿ ಮತ್ತೆ ಯಮಾರಬೇಡಿ ಎಂದು ತಿಳಿಸಿದರು.

ಬಿ.ವೈ.ವಿಜಯೇಂದ್ರ ನೇಮಕವನ್ನು ಕಾಂಗ್ರೆಸ್‌‍ ಸ್ವಾಗತಿಸುತ್ತದೆ. ಯಾವ ಭಯವೂ ಇಲ್ಲ. ಯಡಿಯೂರಪ್ಪ ಅವರ ಸಿಎಂ ಸ್ಥಾನ ಕಳೆದುಕೊಳ್ಳಲು ಯಾರು ಕಾರಣ? 2012ರಲ್ಲಿ ಸಿಎಂ ಸ್ಥಾನ ಹೋಗಲು ಮತ್ತ್ಯಾರು ಕಾರಣ. ಯಡಿಯೂರಪ್ಪ ಅವರ ಸಹಿ ಮಾಡಿದ್ದು, ಆರ್‌ಟಿಜಿಎಸ್‌‍ ಮೂಲಕ ಹಣ ಪಡೆದಿದ್ದು ಯಾರು? ಉತ್ತರಿಸಬೇಕು ಎಂದು ತಿಳಿಸಿದರು.

ಸಂಸದ ಪ್ರತಾಪಸಿಂಹ 15 ದಿನಗಳಿಂದ ಕಾಣುತ್ತಿಲ್ಲ. ಮೋದಿ ನಮ್ಮ ದೇವರು ಎನ್ನುತ್ತಿದ್ದ ಅವರು ನಳಿನ್‌ ಕುಮಾರ್ ಕಟೀಲ್‌ ಅವರನ್ನು ಬದಲಿಸಲು ಕಾರಣವೇನು? ತಿಳಿಸಬೇಕು ಎಂದು ಒತ್ತಾಯಿಸಿದ ಲಕ್ಷ್ಮಣ್‌ ಅವರು, ಕರ್ನಾಟಕದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಪ್ರಭಾವ ಕಡಿಮೆಯಾದ್ದರಿಂದ ವಿಜಯೇಂದ್ರ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 2 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂಬ ಮಾಹಿತಿ ಇದೆ. ಮೋದಿ ಮತ್ತು ಜೆಡಿಎಸ್‌‍ ಇದ್ದ ಮೇಲೆ ಬಿ.ಎಸ್‌‍.ಯಡಿಯೂರಪ್ಪ ಯಾಕೇ ಬೇಕು ಎಂದು ತಿಳಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌‍ ಅಧ್ಯಕ್ಷ ಆರ್‌. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ಸಂಚಾಲಕ ಕೆ.ಮಹೇಶ, ಸೇವಾದಳದ ಗಿರೀಶ್‌ ಇದ್ದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News