ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕುಸಿತ: ಶಾಸಕ ರಿಝ್ವಾನ್ ಅರ್ಶದ್

Update: 2024-09-21 15:58 GMT

ಬೆಂಗಳೂರು: ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೇ.5ಕ್ಕಿಂತ ಕಡಿಮೆ ಇದೆ. ಅದನ್ನು ಸಹಿಸಿಕೊಳ್ಳಲು ಕೋಮುವಾದಿ ಶಕ್ತಿಗಳಿಗೆ ಆಗುತ್ತಿಲ್ಲ. ಆದುದರಿಂದ, ಸಂವಿಧಾನ ಬದ್ಧವಾಗಿ ಲಭ್ಯವಿರುವ ಮೀಸಲಾತಿಯನ್ನು ರದ್ದು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ರಿಝ್ವಾನ್ ಅರ್ಶದ್ ಹೇಳಿದರು.

ಶನಿವಾರ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಡಿವೈನ್ ಸರ್ವೀಸ್ ಫಾರ್ ಎವರ್ ಫೌಂಡೇಶನ್(ಡಿಎಸ್‍ಎಫ್) ವತಿಯಿಂದ ಆಯೋಜಿಸಲಾಗಿದ್ದ ರಾಜ್ಯದಲ್ಲಿ ಭಡ್ತಿ ಪಡೆದ ಮುಸ್ಲಿಮ್ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಸಮುದಾಯದಲ್ಲಿ ಭವಿಷ್ಯದ ಕುರಿತು ಸೂಕ್ತವಾದ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡುವ ಕೊರತೆಯಿಂದಾಗಿ, ಹಿಂದುಳಿಯುವಂತಾಗಿದೆ. ಆರೆಸ್ಸೆಸ್ ಸಂಘಟನೆಯ ಕಾರ್ಯಸೂಚಿ ತಪ್ಪಾಗಿರಬಹುದು. ಆದರೆ, ಆ ಸಂಘಟನೆ ತನ್ನ ಪರಿಶ್ರಮ ಹಾಗೂ ಯೋಜನೆಯಿಂದ 100 ವರ್ಷಗಳಲ್ಲಿ ಪ್ರಭಾವಶಾಲಿಯಾಗಿ ಬೆಳೆದಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಮಾತನಾಡಿ, ಸಮುದಾಯದ ಮಕ್ಕಳನ್ನು ಭವಿಷ್ಯದ ದೃಷ್ಟಿಯಿಂದ ತಯಾರು ಮಾಡಲು 7ನೇ ತರಗತಿಯಿಂದಲೇ ಅವರಿಗೆ ವೃತ್ತಿ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಪದವಿ ಹಂತದಲ್ಲಿ ವೃತ್ತಿ ಮಾರ್ಗದರ್ಶನ ನೀಡಿದರೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಕೆಪಿಎಸ್ಸಿ ಸದಸ್ಯ ನ್ಯಾ.ಮುಸ್ತಫಾ ಹುಸೇನ್, ನಿವೃತ್ತ ಡಿಸಿಪಿ ಜಿ.ಎ.ಬಾವ ಸೇರಿದಂತೆ ಇನ್ನಿತರರು ಮಾತನಾಡಿದರು. ಡಿಎಸ್‍ಎಫ್ ಸಂಸ್ಥಾಪಕ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್ ಸ್ವಾಗತ ಭಾಷಣ ಮಾಡಿ, ಅತಿಥಿಗಳನ್ನು ಪರಿಚಯಿಸಿದರು. ಗೌರವ ಅತಿಥಿಗಳಾಗಿ ಮುಫ್ತಿ ಶಂಸುದ್ದೀನ್ ಖಾಸ್ಮಿ, ಹಾಫಿಝ್ ಸೈಯದ್ ಆಸಿಮ್ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News