ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಲು ಸೂಚಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನಡೆಗೆ ಖಂಡನೆ

Update: 2024-09-22 07:13 GMT

Photo credit: cdjlawjournal.com

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನ್ಯಾಯಕೋರಿ ಬಂದಿದ್ದ ಸತಿ-ಪತಿಗಳಿಬ್ಬರನ್ನು ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಸೂಚಿಸಿರುವುದು ಕಾನೂನು ಬಾಹಿರ ನಡೆಯಾಗಿದೆ ಎಂದು ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ.

ಶನಿವಾರ ಪ್ರೊ.ವಿ.ಪಿ.ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ, ಡಾ.ಸಬಿಹಾ ಭೂಮಿಗೌಡ, ಬಿ. ಸುರೇಶ, ಮೂಡ್ನಾಕೂಡ ಚಿನ್ನಸ್ವಾಮಿ, ಶ್ರೀಪಾದ ಭಟ್ ಸೇರಿ 75 ಮಂದಿ ಗಣ್ಯರು ಜಂಟಿ ಪ್ರಕಟನೆ ಹೊರಡಿಸಿದ್ದು, ‘ದಂಪತಿಗಳು ನೇರವಾಗಿ ಸ್ವಾಮೀಜಿಯ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೂ, ನ್ಯಾಯಾಲಯವೇ ಸ್ವಾಮೀಜಿಯ ಬಳಿ ಹೋಗುವಂತೆ ಸೂಚಿಸುವುದಕ್ಕೂ ವ್ಯತ್ಯಾಸವಿದೆ’ ಎಂದಿದ್ದಾರೆ.

ಜನರು ನ್ಯಾಯ ಸಿಗುತ್ತದೆಯೆಂಬ ಭರವಸೆಯಿಂದ ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ, ನ್ಯಾಯಾಧೀಶರು ತಮ್ಮ ಕಾನೂನಬದ್ಧ ಕರ್ತವ್ಯವನ್ನು ನಿರ್ವಹಿಸುವ ಬದಲು, ಸತಿ-ಪತಿಯನ್ನು ಮಠಾಧೀಶರೊಬ್ಬರ ಬಳಿಗೆ ಮಧ್ಯಸ್ಥಿಕೆವಹಿಸಿ ವಿವಾದ ಬಗೆಹರಿಸಲು ಸೂಚಿಸುವುದು ಅಥವಾ ನಿರ್ದೇಶಿಸುವುದು, ಮಠಗಳು ಸಂವಿಧಾನ ಕೊಡಮಾಡಿರುವ ನ್ಯಾಯಾಲಯಗಳಿಗಿಂತ ದೊಡ್ಡವು ಎಂಬ ಭಾವನೆಯನ್ನು ಜನರಲ್ಲಿ ಬೆಳೆಸುತ್ತವೆ ಎಂದು ಅವರುಗಳು ಖಂಡಿಸಿದ್ದಾರೆ.

ನ್ಯಾಯಾಲಯಗಳು ವಾದ-ಪ್ರತಿವಾದಗಳನ್ನು ಆಲಿಸಿ, ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ಒದಗಿಸುವ ಬದಲು ಮಠದ ಸ್ವಾಮೀಜಿಯವರ ಮಧ್ಯಸ್ಥಿಕೆಗೆ ಸೂಚಿಸುವುದು ಯಾವ ಬಗೆಯ ನ್ಯಾಯ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಬಾಹಿರವಾಗಿರುವ ಹೈಕೋರ್ಟಿನ ನ್ಯಾಯಾದೀಶರ ಇಂಥ ನಡೆಗಳ ಬಗ್ಗೆ ಕ್ರಮ ತಗೆದುಕೊಳ್ಳಬೇಕು. ಸೂಕ್ತವಾದ ನಿರ್ದೇಶನವನ್ನು ಅದೀನ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡಬೇಕು ಹಾಗೂ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ನಿರ್ಧಿಷ್ಟ ಜಾತಿ, ಧರ್ಮಕ್ಕೆ ಸೇರಿದ ಮಠಮಾನ್ಯಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ, ಸಂವಿಧಾನದ ಅಡಿಯಲ್ಲಿ ಸ್ಥಾಪಿತವಾಗಿರುವ ನ್ಯಾಯಾಲಯಗಳ ಅವಶ್ಯಕತೆಯಾದರು ಏನು ಎಂಬ ಪ್ರಶ್ನೆ ಮೂಡುತ್ತದೆ. ನಾವು ಮಠಮಾನ್ಯಗಳನ್ನೇ ನ್ಯಾಯಾಲಯಗಳೆಂದು ಘೋಷಿಸಿಬಿಡಬಹುದು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನಡೆ ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News