ಸಂಪುಟ ನಿರ್ಧಾರಕ್ಕೂ ಮುಡಾ ಪ್ರಕರಣಕ್ಕೂ ಸಂಬಂಧವಿಲ್ಲ: ಸಚಿವ ಕೃಷ್ಣ ಬೈರೇಗೌಡ

Update: 2024-09-27 16:24 GMT

ಬೆಂಗಳೂರು: ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅವಕಾಶವನ್ನು ಹಿಂಪಡೆದ ಸಚಿವ ಸಂಪುಟ ನಿರ್ಧಾರಕ್ಕೂ, ಮುಖ್ಯಮಂತ್ರಿಗಳ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಯಾವುದೇ ಪ್ರಕರಣ ತನಿಖೆಗೆ ತೆಗೆದುಕೊಳ್ಳಬೇಕು ಎಂದರೆ ಒಂದೋ ರಾಜ್ಯ ಸರಕಾರ ಅನುಮತಿ ನೀಡಬೇಕು. ಇಲ್ಲವೇ, ನ್ಯಾಯಾಲಯ ನಿರ್ದೇಶಿಸಬೇಕು ಎಂಬುದು ನಿಯಮ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯ ಇಲ್ಲ ಎಂದರು.

ರಾಜ್ಯದ ಯಾವುದೇ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಅಸಲಿಗೆ ಯಾರೇ ಶಾಸಕ, ಸಚಿವ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದರೆ ಸರಕಾರದ ಅನುಮತಿ ಕಡ್ಡಾಯ ಎಂಬ ನಿಯಮ ಈಗಾಗಲೇ ಇದೆ. ರಾಜ್ಯ ಸರಕಾರದ ಅನುಮತಿ ತೆಗೆದುಕೊಂಡೇ ಸಿಬಿಐ ಅಧಿಕಾರಿಗಳು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಸರಕಾರ ಯಾವ ಬದಲಾವಣೆಯನ್ನೂ ಮಾಡಿಲ್ಲ ಎಂದು ಅವರು ಹೇಳಿದರು.

2005ರಲ್ಲಿ ಕೆಲವು ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ಪ್ರಕರಣ ತೆಗೆದುಕೊಳ್ಳಲು ರಾಜ್ಯ ಸರಕಾರ ಸಿಬಿಐಗೆ ವಿನಾಯಿತಿ ನೀಡಿತ್ತು. ಈಗ ಆ ವಿನಾಯಿತಿಯನ್ನು ನಮ್ಮ ಸರಕಾರ ಹಿಂಪಡೆದಿದೆ ಅಷ್ಟೇ. ಏಕೆಂದರೆ ಕಾನೂನು ಪ್ರಕಾರ ಆ ಹಕ್ಕು ಇರುವುದು ರಾಜ್ಯ ಪೊಲೀಸರಿಗೆ ಮಾತ್ರ. ಹೀಗಾಗಿ ಈ ನಿರ್ಧಾರ ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರ ಅಲ್ಲ ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಮುನಿರತ್ನ ಅಪರಾಧದಲ್ಲಿ ಬಿಜೆಪಿಗರೂ ಭಾಗಿಯೇ?: ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಮುನಿರತ್ನ ಅವರ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಬಿಜೆಪಿಯ ಇತರೆ ನಾಯಕರೂ ಭಾಗಿಯಾಗಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಮುನಿರತ್ನ ತನ್ನನ್ನು ವಿಕಾಸಸೌಧ ಕಚೇರಿಯಲ್ಲೇ ಅತ್ಯಾಚಾರ ಮಾಡಿದ್ದಾರೆ. ಕೆಲವು ಅತ್ಯಾಚಾರ ಪ್ರಕರಣಗಳಿಗೆ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಎದುರು ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಎದುರಾಳಿಗಳಿಗೆ ಏಡ್ಸ್ ಸೋಂಕಿತ ಮಹಿಳೆಯ ಮೂಲಕ ಹನಿಟ್ರ್ಯಾಪ್ ಮಾಡಿಸಿ ಆತನಿಗೂ ಮಾರಕ ರೋಗ ಹರಡಿಸುವ ಯೋಜನೆ ರೂಪಿಸಿದ್ದಾರೆ. ಹೀಗಿದ್ದಾಗಲೂ ಬಿಜೆಪಿ ನಾಯಕರು ಅವರ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News