ಸಿಬಿಐ ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ

Update: 2024-09-26 17:17 GMT

ಬೆಂಗಳೂರು : ಕೇಂದ್ರ ತನಿಖಾ ದಳ(ಸಿಬಿಐ) ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿಬಿಐಗೆ ಯಾವುದೇ ಮುಕ್ತ ಅವಕಾಶವಿರಬಾರದೆಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಬಿಐ ತನಿಖೆಗೆ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ. ಸಿಬಿಐ ಅನ್ನು ಕೇಂದ್ರ ಸರಕಾರ ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಇನ್ನುಮುಂದೆ ಯಾವುದಾದರೂ ಪ್ರಕರಣದಲ್ಲಿ ಸಿಬಿಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯ ಸರಕಾರದ ಒಪ್ಪಿಗೆ ಮುಖ್ಯವಾದದ್ದು ಮತ್ತು ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿಬಿಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

‘ಸರಕಾರದ ಅವ್ಯವಹಾರಗಳು ಮತ್ತು ಅಕ್ರಮಗಳ ಬಗ್ಗೆ ಪತ್ರದ ಮೂಲಕ ಪ್ರಶ್ನೆ ಮಾಡಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ರಾಜ್ಯಪಾಲರಿಗೆ ಅಂಕುಶ ಹಾಕಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿದ್ದರಾಮಯ್ಯ, ಈಗ ಸಿಬಿಐ, ರಾಜ್ಯಪಾಲರ ಮೇಲೆ ತಮ್ಮ ಹಿಟ್ಲರ್ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ದರಾಮಯ್ಯ, ಒಂದು ವೇಳೆ ಅವಕಾಶವಿದ್ದದ್ದರೆ ತಮ್ಮ ವಿರುದ್ಧ ತೀರ್ಪು ನೀಡುತ್ತಿರುವ ಕೋರ್ಟ್‍ಗಳಿಗೂ ಮತ್ತು ನ್ಯಾಯಾಧೀಶರಿಗೂ ಅಂಕುಶ ಹಾಕುತಿದ್ದರೇನೋ ಅನ್ನಿಸುತ್ತಿದೆ’

-ಆರ್.ಅಶೋಕ್, ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News