ಸಂಪುಟ ಉಪ ಸಮಿತಿ ಸಭೆ ಸೆ.7ಕ್ಕೆ ಮುಂದೂಡಿಕೆ
ಬೆಂಗಳೂರು, ಸೆ.3: ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಸುಮಾರು 130 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿಕೊಂಡಿದ್ದು, ಸೆ.4(ಸೋಮವಾರ)ರಂದು ಸಂಪುಟ ಉಪ ಸಮಿತಿ ಸಭೆ ನಡೆಸಿ ಬರಪೀಡಿತ ತಾಲೂಕುಗಳನ್ನು ಘೋಷಿಸಲು ಉದ್ದೇಶಿಸಲಾಗಿತ್ತು.
ಆದರೆ, ಇನ್ನೂ ಹಲವು ತಾಲೂಕುಗಳಿಂದ ಬೆಳೆ ಸಮೀಕ್ಷೆ ವರದಿ ಬರುವುದು ತಡವಾಗಿರುವುದು ಹಾಗೂ ಎರಡು ದಿನಗಳಿಂದ ಪುನಃ ಮಳೆ ಪ್ರಾರಂಭವಾಗಿರುವುದರಿಂದ ಸಂಪುಟ ಉಪ ಸಮಿತಿ ಸಭೆಯನ್ನು ಸೆ.7ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ.
ಈಗಾಗಲೆ ಎರಡು ಬಾರಿ ಸಚಿವ ಸಭೆ ನಡೆಸಿರುವ ಸಂಪುಟ ಉಪ ಸಮಿತಿಯು ಬೆಳೆ ಸಮೀಕ್ಷೆಯನ್ನು ನಡೆಸಿ ವರದಿ ನೀಡುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದರಂತೆ, ಬಹುತೇಕ ಎಲ್ಲ ಜಿಲ್ಲೆಗಳಿಂದ ವರದಿ ಸಲ್ಲಿಕೆಯಾಗಿದ್ದು, ಇನ್ನು ಕೆಲವು ತಾಲೂಕುಗಳಿಂದ ವರದಿ ಬರುವುದು ಬಾಕಿಯಿದೆ. ಸೆ.7ರಂದು ಬೆಳಗ್ಗೆ 11 ಗಂಟೆಗೆ ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಕೃಷಿ ಸಚಿವ ಚಲುವರಾಯಸ್ವಾಮಿ ಭಾಗವಹಿಸಲಿದ್ದಾರೆ.