ಮೂಡಿಗೆರೆ | ದೇವರಮನೆ ಸಮೀಪ ಮೃತದೇಹ ಎಸೆದ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
ಮೂಡಿಗೆರೆ: ಯುವಕನೋರ್ವನನ್ನು ಕೊಲೆ ಮಾಡಿ ತಾಲೂಕಿನ ದೇವರಮನೆ ಸಮೀಪದ ಗುಡ್ಡದಲ್ಲಿ ಇತ್ತೀಚೆಗೆ ಮೃತದೇಹ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವುದು ವರದಿಯಾಗಿದೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದಾವೂದ್ ಅಮೀರ್(25), ಅಬ್ದುಲ್ ರಹೀಜ್ (23), ಬಂಟ್ವಾಳ ತಾಲೂಕಿನ ಕವಾಲ ಮಡೂರು ಗ್ರಾಮದ ಆಫ್ರಿದಿ(23), ಮುಹಮ್ಮದ್ ಇರ್ಷಾದ್ (20) ಎಂದು ಗುರುತಿಸಲಾಗಿದೆ.
ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಮೈನುಲ್ಲಾ ಎಂಬವರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ರವಿವಾರ ರಾತ್ರಿ ಬಂಧಿಸಲಾಗಿ ದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಜೂ.8ರಂದು ದೇವರಮನೆ ಸಮೀಪದ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು.
ಆ ಮೃತದೇಹ ತಮ್ಮ ಮಗನದೆಂದು ಬಂಟ್ವಾಳ ಮೂಲದ ಕುಟುಂಬವೊಂದು ಗುರುತಿಸಿತ್ತು. ಕೊಲೆಗೀಡಾದ ಸಾವದ್ ಮಾದಕವಸ್ತು ವ್ಯಸನಿಯಾಗಿದ್ದ ಮತ್ತು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿತ್ತು. ಗಾಂಜಾ ಮಾರಾಟ ವ್ಯವಹಾರದಲ್ಲಿ ಉಂಟಾದ ಗಲಾಟೆ ಕೊಲೆಗೆ ಕಾರಣವಾಗಿತ್ತು ಎಂದು ತಿಳಿದುಬಂದಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರೆಯ ಬೆಂಗ್ರೆ ಎಂಬಲ್ಲಿ ಸಾವನ್ನು ಕೊಲೆ ಮಾಡಿದ ಆರೋಪಿಗಳು ಮೃತದೇಹವನ್ನು ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡ ದಲ್ಲಿ ಎಸೆದು ಹೋಗಿದ್ದರು.
ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ ಮತ್ತು ಬಣಕಲ್ ಎಸ್ಸೆ ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸರು ಆರಂಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ನಾಪತ್ತೆಯಾಗಿದ್ದ ಆರೋಪಿಗಳನ್ನು ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.