ಕಾವೇರಿ ನೀರು ವಿಚಾರ; ಬೊಮ್ಮಾಯಿ ಅವರದ್ದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-09-19 06:42 GMT

ಬೆಂಗಳೂರು: "ಕಾವೇರಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆಯನ್ನು ಬೊಮ್ಮಾಯಿ ನೀಡುತ್ತಿದ್ದಾರೆ. ನೀರು ಬಿಡಲು ನಾವು ತಯಾರಿಲ್ಲ, ಹೀಗಾಗಿ ಕಾನೂನು ಹೋರಾಟ ನಡೆಸುತ್ತೇವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಬೊಮ್ಮಾಯಿ ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದರು ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಆದರೆ ಸುಪ್ರೀಂ ಕೋರ್ಟ್ ಅನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ನೀರು ಬಿಡಬೇಡಿ ಎಂದು ಬೊಮ್ಮಾಯಿ ಹೇಳುತ್ತಾರೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ಬೊಮ್ಮಾಯಿ ಹಾಗೂ ನನ್ನ ಬಳಿ ಯಾವ ಆಯ್ಕೆ ಇದೆ? ಎಂದು ಪ್ರಶ್ನಿಸಿದರು.

ನಾನು ಶೀಘ್ರದಲ್ಲೇ ದೆಹಲಿಗೆ ಹೋಗಲಿದ್ದು, ಸಂಸದರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ.‌ ಮಧ್ಯಸ್ತಿಕೆ ವಹಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಬೊಮ್ಮಾಯಿ ಅವರು ರಾಜಕಾರಣ ಬದಿಗಿಡಲಿ. ಕೂಡಲೇ ಪ್ರಧಾನಿಗಳಿಗೆ ಮಧ್ಯಸ್ತಿಕೆ ವಹಿಸುವಂತೆ ಒತ್ತಡ ತರಲಿ. ನೀರು ನಿರ್ವಹಣಾ ಸಮಿತಿಗೂ ಮನವಿ ಸಲ್ಲಿಸಲಿ. ರಾಜ್ಯದ ಹಿತವನ್ನು ಅವರು ಮೊದಲು ಕಾಪಾಡಲಿ ಎಂದರು.

"ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ" ಎಂದು ಎಚ್.ಡಿ.ದೇವೇಗೌಡರು ರಾಜ್ಯಸಭೆಯಲ್ಲಿ ಸೋಮವಾರ ಸಲಹೆ ನೀಡಿರುವುದು ಸರಿಯಾಗಿದೆ. ಹಿರಿತನದ ಅನುಭವದ ಮೇಲೆ ಅವರು ಮಾತನಾಡಿದ್ದಾರೆ. ಅವರ ಸಲಹೆ ಸ್ವೀಕಾರ್ಹವಾಗಿದೆ. ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೊ ಅಥವಾ ಇವರ ಮಾತನ್ನು ಕೇಳಬೇಕೊ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News